ಧಾರವಾಡ: ರಾಜ್ಯದಲ್ಲಿ ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಧಾರವಾಡದ ಪುರೋಹಿತ್ ನಗರದಲ್ಲಿ ಮಂಗಳವಾರ ನಡೆದಿದೆ.
ಜೀವಿತಾ ಕುಸಗೂರ (26) ಎಂಬ ಯುವತಿ ಹೃದಯಾಘಾತದಿಂದ ಮೃತಪಟ್ಟವರು. ನಿನ್ನೆ ಬೆಳಗ್ಗೆ ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಯುವತಿ ಸುಸ್ತಾಗಿ ಕುಳಿತಿದ್ದರು. ನಂತರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಮಾರ್ಗ ಮಧ್ಯದಲ್ಲೇ ಯುವತಿ ಕೊನೆಯುಸಿರೆಳೆದಿದ್ದಾರೆ.
ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಎಂಎಸ್ಸಿ ಅಗ್ರಿ ಓದಿದ್ದ ಜೀವಿತಾ ಯುಪಿಎಸ್ಸಿ ಕನಸು ಹೊಂದಿದ್ದು, ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಇವರ ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದಾರೆ. ಉನ್ನತ ಹುದ್ದೆಯ ಗುರಿ ಇರಿಸಿಕೊಂಡಿದ್ದ ಯುವತಿ ಚಿಕ್ಕ ವಯಸ್ಸಿನಲ್ಲೇ ನಿಧನರಾಗಿದ್ದು, ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.
