Home ಅಪರಾಧ ಕೊಡವ ಜನಾಂಗದ ಅವಹೇಳನಗೈದ ದುಷ್ಕರ್ಮಿ ದಿವಿನ್ ದೇವಯ್ಯ ಬಂಧನ: ಪೊಲೀಸ್ ತಂಡಕ್ಕೆ 25000 ರೂ.ನಗದು ಬಹುಮಾನ...

ಕೊಡವ ಜನಾಂಗದ ಅವಹೇಳನಗೈದ ದುಷ್ಕರ್ಮಿ ದಿವಿನ್ ದೇವಯ್ಯ ಬಂಧನ: ಪೊಲೀಸ್ ತಂಡಕ್ಕೆ 25000 ರೂ.ನಗದು ಬಹುಮಾನ ಘೋಷಿಸಿದ ಡಿಜಿಪಿ

ಮಡಿಕೇರಿ: ನಕಲಿ ಇನ್ಸ್ ಸ್ಟಾಗ್ರಾಮ್ ಖಾತೆ ತೆರೆದು ಕಾವೇರಿ ಹಾಗೂ ಕೊಡವ ಜನಾಂಗವನ್ನು ಅವಹೇಳನ ಮಾಡಿ ಜಿಲ್ಲಾದ್ಯಂತ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಸಿದ್ದ ದುಷ್ಕರ್ಮಿಯನ್ನು ಬಂಧಿಸಿರುವ ಕೊಡಗು ಜಿಲ್ಲಾ ಪೊಲೀಸರ ಕಾರ್ಯವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್ ಶ್ಲಾಘಿಸಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ 25000 ರೂ.ಬಹುಮಾನ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಡಗು ಜಿಲ್ಲೆಯ ಒಂದು ಜನಾಂಗದ ವಿರುದ್ದ ಅವಹೇಳನ ಮಾಡಿದ್ದ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ ಜಿಲ್ಲೆಯ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ರಾಜ್ಯದ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ರೂ. 25,000 ನಗದು ಬಹುಮಾನ ಘೋಷಿಸಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕೊಡವ ಜನಾಂಗವನ್ನು ಅವಹೇಳನ ಮಾಡಿದ್ದ ವಿರಾಜಪೇಟೆ ತಾಲೂಕಿನ ಕೆ.ಸಿ.ದಿವಿನ್ ದೇವಯ್ಯ (29) ಎಂಬ ಕೊಡವ ಯುವಕನನ್ನು ಭಾನುವಾರ ಜಿಲ್ಲಾ ಪೊಲೀಸರು ಬಂಧಿಸಿದ್ದರು.   

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಕೊಡವ ಸಮಾಜದ ಮಹಿಳೆಯರನ್ನು ಅವಹೇಳನ ಮಾಡಿ ಅಪರಿಚಿತ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ನಂತರ ಇದಕ್ಕೆ ಸಂಬಂಧವಿಲ್ಲದ ಅಮಾಯಕ ಮುಸ್ಲಿಮ್ ಯುವಕನ ಫೋಟೋ ಎಡಿಟ್ ಮಾಡಿ ವ್ಯಾಪಕವಾಗಿ ಹರಡಿ ಆತನಿಗೆ ಮಾನಸಿಕ ಕಿರುಕುಳ ನೀಡಲಾಗಿತ್ತು. ಈ ಮಧ್ಯೆ ಸಂಘಪರಿವಾರ ಜಿಲ್ಲಾ ಬಂದ್ ಕರೆ ನೀಡಿತ್ತು. ಇಂದಿನಿಂದ ಜಿಲ್ಲಾದ್ಯಂತ ಪ್ರತಿಭಟನೆಗೂ ಕರೆ ನೀಡಲಾಗಿತ್ತು. ಆದರೆ ಪೊಲೀಸರ ಸಮಯೋಚಿತ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ನೈಜ ಆರೋಪಿ ದಿವಿನ್ ದೇವಯ್ಯನ ಬಂಧನವಾಗುವುದರೊಂದಿಗೆ ದೊಡ್ಡಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

Join Whatsapp
Exit mobile version