ಬೆಂಗಳೂರು: ಸ್ವಾತಂತ್ರ್ಯ ಗಳಿಸುವುದು ಮಾತ್ರವಲ್ಲ ಅದನ್ನು ರಕ್ಷಿಸುವುದು ಕೂಡ ಅಷ್ಟೇ ಮಹತ್ವದ ಕಾರ್ಯವಾಗಿದೆ. ಎಲ್ಲಾ ಚಳವಳಿಗಳ ಯಶಸ್ವಿಗೂ ತ್ಯಾಗ ಮತ್ತು ಬಲಿದಾನವೇ ಮುಖ್ಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯವನ್ನು ರಕ್ಷಿಸಲು ಮಾಡಿದ ತ್ಯಾಗ, ಬಲಿದಾನವನ್ನು ಸ್ವಾತಂತ್ರ್ಯದ ರಕ್ಷಣೆಗೂ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾರು ಎಷ್ಟೇ ಇತಿಹಾಸ ತಿರುಚಿದರೂ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಇತಿಹಾಸ ಸ್ಮರಿಸುತ್ತದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ ಅಪಾರವಾದುದು. ಪೋರ್ಚುಗೀಸರನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಕೇರಳದ ಮಲಬಾರ್ ನ ಮರಕ್ಕಾರ್ ಕುಟುಂಬ ಯಶಸ್ವಿಯಾಗಿತ್ತು. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಯುದ್ಧಭೂಮಿಯಲ್ಲಿ ಹುತಾತ್ಮರಾದರು. ಅಮೆರಿಕದವರು ಕೂಡ ಹೈದರಾಲಿ ಮತ್ತು ಟಿಪ್ಪುವಿನ ಧೀರೋದಾತ್ತ ಹೋರಾಟದಿಂದ ಸ್ಫೂರ್ತಿ ಪಡೆದಿದ್ದರು. ಹಡಗು ಒಂದಕ್ಕೆ ಹೈದರಾಲಿ ಎಂದು ಹೆಸರಿಟ್ಟಿದ್ದರು. ಜನಸಾಮಾನ್ಯರಿಗೆ ರಾಷ್ಟ್ರೀಯತೆಯ ಅರ್ಥ ಗೊತ್ತಿಲ್ಲದ ಕಾಲದಲ್ಲೇ ಟಿಪ್ಪು ಸುಲ್ತಾನ್ ಅಪ್ಪಟ ರಾಷ್ಟ್ರೀಯವಾದಿಯಾಗಿ ತನ್ನ ದೇಶಕ್ಕಾಗಿ ಹೋರಾಡಿ ಹುತಾತ್ಮರಾದರು ಎಂದು ಅನೀಸ್ ಅಹ್ಮದ್ ಬಣ್ಣಿಸಿದರು.
1857ರ ಸಮರದಲ್ಲೂ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಪಂಜಾಬಿ ಸೇರಿದಂತೆ ಎಲ್ಲಾ ಭಾರತೀಯ ಸೈನಿಕರು ದೆಹಲಿಗೆ ಧಾವಿಸಿ 80ರ ಹರೆಯದ ಬಹುದ್ದೂರ್ ಶಾ ಝಫರ್ ಅವರನ್ನು ತಮ್ಮ ನಾಯಕರೆಂದು ಘೋಷಿಸಿದರು. ಎಲ್ಲರೂ ಒಗ್ಗಟ್ಟಾದ ಪರಿಣಾಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಆದರೆ ಯಾವುದೇ ಚಳವಳಿಯಲ್ಲಿ ಪಾಲ್ಗೊಳ್ಳದ ಸಾವರ್ಕರ್ ಅವರಂತಹರನ್ನು ಇಂದು ಹೀರೋಗಳಾಗಿ ತೋರಿಸುವ ಪ್ರಯತ್ನ ನಡೆಯುತ್ತಿದೆ. ಸಾವರ್ಕರ್ ಐದು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು. ಮಾತ್ರವಲ್ಲ ಭಾರತೀಯರು ಬ್ರಿಟಿಷರ ವಿರುದ್ಧದ ಯಾವುದೇ ಚಳವಳಿಯಲ್ಲಿ ಪಾಲ್ಗೊಳ್ಳಬಾರದು ಎಂದು ಕರೆ ನೀಡಿದ್ದರು. ನೀವು ನಿಮ್ಮ ಶಕ್ತಿಯನ್ನು ಆಂತರಿಕ ಶತ್ರುಗಳಾದ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಷ್ಟರ ವಿರುದ್ಧ ಬಳಸಿ ಎಂದು ಸಾವರ್ಕರ್ ಮತ್ತು ಹೆಗ್ಡೇವಾರ್ ಯುವಕರಿಗೆ ಕರೆ ನೀಡಿದ್ದರು. ಇಂತಹವರನ್ನು ಯಾವುದೇ ಕಾರಣಕ್ಕೂ ದೇಶಪ್ರೇಮಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪಾಪ್ಯುರಲ್ ಫ್ರಂಟ್ ರಾಜ್ಯಾಧ್ಯಕ್ಷ ನಾಸೀರ್ ಪಾಶಾ ಧ್ವಜಾರೋಹಣ ನೆರವೇರಿಸಿದರು. ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ವಾಹಿದ್ ಸೇಠ್, ರಾಜ್ಯ ಸಮಿತಿ ಸದಸ್ಯ ಯಾಸೀರ್ ಹಸನ್, ಬೆಂಗಳೂರು ಜಿಲ್ಲಾಧ್ಯಕ್ಷ ಜಾವೇದ್ ಮತ್ತಿತರರು ಪಾಲ್ಗೊಂಡಿದ್ದರು.