ಗಾಝಾಪಟ್ಟಿ ವಶಪಡಿಸಿಕೊಳ್ಳದಂತೆ ಅಮೆರಿಕವೂ ಎಚ್ಚರಿಕೆ:
ನ್ಯೂಯಾರ್ಕ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರೆಯುತ್ತಿರುವುದಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗ್ಯುಟೆರಸ್ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಗಾಝಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ.ತಕ್ಷಣವೇ ಕದನವಿರಾಮ ಘೋಷಿಸಿ ಎಂದು ಇಸ್ರೇಲ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಕದನ ವಿರಾಮ ವಿಚಾರದಲ್ಲಿ ಎರಡು ದೇಶಗಳು ಮಾತ್ರ ಭಾಗಿಯಾಗುವುದಲ್ಲ, ಅಂತಾರಾಷ್ಟ್ರೀಯ ಸಮುದಾಯ ಕೂಡಾ ಗಮನಹರಿಸಬೇಕು ಎಂದು ಗ್ಯುಟೆರಸ್ ತಿಳಿಸಿದ್ದಾರೆ.
ಗಾಝಾಪಟ್ಟಿಗೆ ಮಾನವೀಯತೆಯ ನೆರವಿನ ಅಗತ್ಯವಿದೆ. ಯುದ್ಧದಿಂದಾಗಿ ಸಾವಿರಾರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ, ಔಷಧ, ಚಿಕಿತ್ಸೆಗಳಿಲ್ಲದೇ ಸಾವಿರಾರು ಮಂದಿ ಕಂಗಾಲಾಗಿದ್ದಾರೆ ಎಂದು ವಿವರಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮುಂದುವರಿದಿರುವ ಇಸ್ರೇಲ್ ದಾಳಿಯಿಂದಾಗಿ ವಿಶ್ವಸಂಸ್ಥೆಯ ರಕ್ಷಣಾ ತಂಡ ಭಾರೀ ಬೆಲೆ ತೆತ್ತಿದೆ, ಯುದ್ಧದಲ್ಲಿ ವಿಶ್ವಸಂಸ್ಥೆಯ ರಕ್ಷಣಾ ತಂಡದ 89 ಸಿಬ್ಬಂದು ತಮ್ಮ ಜೀವ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆಯೆಂದು ಗ್ಯುಟೆರಸ್ ತಿಳಿಸಿದ್ದಾರೆ.
ಇಸ್ರೇಲ್ ಗಾಝಾಪಟ್ಟಿಯನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಕಳವಳ ವ್ಯಕ್ತಪಡಿಸಿದ ಅಮೆರಿಕ, ಇಸ್ರೇಲ್ ಸೇನಾಪಡೆ ಗಾಝಾಪಟ್ಟಿಯನ್ನು ವಶಪಡಿಸಿಕೊಳ್ಳದಂತೆ ಎಚ್ಚರಿಕೆ ನೀಡಿದೆ ಎಂದು ವರದಿಯೊಂದು ತಿಳಿಸಿದೆ.