Home ಮೀಟುಗೋಲು ಫಾದರ್ ಸ್ಟ್ಯಾನ್ ಸ್ವಾಮಿ ಸಾವು- ಪ್ರಜಾಪ್ರಭುತ್ವದ ವ್ಯವಸ್ಥಿತ ಹತ್ಯೆ

ಫಾದರ್ ಸ್ಟ್ಯಾನ್ ಸ್ವಾಮಿ ಸಾವು- ಪ್ರಜಾಪ್ರಭುತ್ವದ ವ್ಯವಸ್ಥಿತ ಹತ್ಯೆ

ಪ್ರಜಾಪ್ರಭುತ್ವದ ಅತಿದೊಡ್ಡ ಹಕ್ಕುದಾರ ಎಂಬ ಹೆಗ್ಗಳಿಕೆಯನ್ನು ಸಾರುತ್ತಿರುವ ಭಾರತದಲ್ಲಿ ಇಷ್ಟೊಂದು ಕ್ರೌರ್ಯ, ಅಮಾನವೀಯತೆಯನ್ನು ಪ್ರಭುತ್ವ ನಡೆಸುತ್ತಿದೆ ಎನ್ನುವುದು ಸ್ಟ್ಯಾನ್ ಸ್ವಾಮಿಯ ಸಾವಿನಿಂದ ಜಗಜ್ಜಾಹೀರಾಗಿದೆ. ಗಣಿ ಮಾಫಿಯಾಗಳ ಹಿಂಸೆ ಹಾಗೂ ಶೋಷಣೆಗಳಿಗೆ ಒಳಗಾಗುತ್ತಿರುವ ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿ ಅವರ ಹಕ್ಕುಗಳಿಗಾಗಿ ಹೋರಾಟವನ್ನು ಸಂಘಟಿಸಿದ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿಯವರ ಸಾವು ದೇಶ ವಿದೇಶಗಳಲ್ಲಿ ತೀಕ್ಷ್ಣ ವಿರೋಧದ ಪ್ರತಿಕ್ರಿಯೆಯ ಅಲೆಯನ್ನು ಹುಟ್ಟುಹಾಕಿದೆ. ಸರಕಾರದ ಟೀಕಾಕಾರರನ್ನು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಆಡಳಿತ ವ್ಯವಸ್ಥೆಯ ಮೂಲಕ ಹೊಸಕಿ ಹಾಕಲಾಗುತ್ತಿದೆ ಎನ್ನುವ ಸತ್ಯ ಬಯಲಾಗಿದೆ. ಇಂತಹ ಸಾಂಸ್ಥಿಕ ಹತ್ಯೆಗಳ ಮೂಲಕ ಹೋರಾಟಗಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಸ್ಥೈರ್ಯದ ಹುಟ್ಟಡಗಿಸಲು ಒಕ್ಕೂಟ ಸರಕಾರ ಹತಾಶ ಪ್ರಯತ್ನ ನಡೆಸುತ್ತಿದೆ. ತೀವ್ರವಾದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 84 ವರ್ಷದ ಸ್ಟ್ಯಾನ್ ಸ್ವಾಮಿಯವರಿಗೆ ನೀರು ಕುಡಿಯಲು ಅಗತ್ಯವಾದ ‘‘ಸಿಪ್ಪರ್’’ ನೀಡದೆ ಸತಾಯಿಸಿದ ಮತ್ತು ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆಯನ್ನು ನಿರಾಕರಿಸಿದ ಸರಕಾರವು ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ಮಾನವ ಹಕ್ಕುಗಳ ಹಾಗೂ ಸಾಮಾಜಿಕ ಹೋರಾಟಗಾರರಿಗೆ ತೀವ್ರ ಯಾತನೆ ಕಿರುಕುಳವನ್ನು ನೀಡುತ್ತಿದೆ. ಹೋರಾಟಗಾರರು ಜೈಲಿನಲ್ಲೇ ಇರಬೇಕೆನ್ನುವಂತೆ ಕರಾಳ ಕಾನೂನುಗಳ ಮೂಲಕ ಕೇಸುಗಳನ್ನು ಫಿಕ್ಸ್ ಮಾಡಲಾಗುತ್ತಿದೆ. ಸುಳ್ಳು ಸಾಕ್ಷ್ಯ, ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಜಾಮೀನು ಸಿಗದಂತೆ ನೋಡಿಕೊಳ್ಳುತ್ತಿದೆ. ಸಿಎಎ ವಿರೋಧಿ ಹೋರಾಟಗಾರರಿಗೆ ನೇತೃತ್ವ ನೀಡಿದವರನ್ನು, ಅತ್ಯಾಚಾರ – ಧ್ವಂಸ – ಹತ್ಯೆ ಪ್ರಕರಣಗಳ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರನ್ನು, ತಳ ವರ್ಗಗಳ ಹಕ್ಕುಗಳಿಗಾಗಿ ಹೋರಾಟ ಮಾಡುವವರನ್ನು ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ನಿರ್ದಯವಾಗಿ ಹಿಂಸಿಸಲಾಗುತ್ತದೆ.

ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಒಂದು ಅಣಕವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯ ಟೀಕಾಕಾರರ ಮತ್ತು ಬಿಜೆಪಿ ಸರಕಾರದ ವಿಮರ್ಶಕರ ಹುಟ್ಟಡಗಿಸುವ ಪ್ರಯತ್ನದಲ್ಲಿ ಮಗ್ನಗೊಂಡಿರುವ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಕಗ್ಗೊಲೆಗೈಯುತ್ತಿದೆ. ದೇಶದಾದ್ಯಂತ ಈಗಲೂ ಲಿಂಚಿಂಗ್ ಪ್ರಕರಣಗಳು, ಮಸೀದಿ ಚರ್ಚ್ ಧ್ವಂಸ ಘಟನೆಗಳು, ದಲಿತರ ಮೇಲೆ ನಿರಂತರ ಆಕ್ರಮಣ ಪ್ರಕರಣಗಳು, ದ್ವೇಷ ಭಾಷಣ ಪ್ರಕರಣಗಳು ವರದಿಯಾಗುತ್ತಿದ್ದರೂ ವಿಧ್ವಂಸಕರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮವನ್ನು ಸರಕಾರ ಕೈಗೊಳ್ಳುತ್ತಿಲ್ಲ. ಪ್ರಧಾನಮಂತ್ರಿಯವರು ಇತ್ತೀಚೆಗೆ ಸಂಪುಟದ ಪುನರ್ವಿಂಗಡನೆ ಮಾಡಿದರು. ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ ಎನ್ನಲಾದ ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿದರು. ವಿಪರ್ಯಾಸವೆಂದರೆ, ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದ, ದೇಶವನ್ನು ಸಾಂಕ್ರಾಮಿಕ ದುರಂತಕ್ಕೆ ದೂಡಿದ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ತನ್ನ ಸ್ಥಾನದಲ್ಲಿ ಭದ್ರವಾಗಿ ತಳವೂರಿರುವುದು ಈ ದೇಶದ ದುರಂತವೇ ಸರಿ. ಕಳೆದ ಏಳು ತಿಂಗಳಿಂದ ಸರಕಾರದ ನೀತಿಯ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ಮುಗುಮ್ಮಾಗಿ ಕಾಲ ಕಳೆಯುತ್ತಿರುವ ಪ್ರಧಾನಮಂತ್ರಿ ಮತ್ತು ಬಿಜೆಪಿ ಸರ್ಕಾರದಿಂದ ದೇಶಕ್ಕೆ ಏನೇನು ಒಳಿತಾಗುವ ಸಾಧ್ಯತೆಯೇ ಇಲ್ಲ. ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ, ವಿಮರ್ಶಕರ ಹಾಗೂ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವವರನ್ನು ಜೈಲಿಗೆ ತಳ್ಳುವ ಅಥವಾ ಕೊಲ್ಲುವುದಕ್ಕಾಗಿ ವ್ಯವಸ್ಥೆಯ ದುರುಪಯೋಗ ಮಾಡುತ್ತಿರುವ ಸರಕಾರ ಪ್ರಜಾಪ್ರಭುತ್ವಕ್ಕೆ ಕಳಂಕ ಮಾತ್ರ ಅಲ್ಲ ದೇಶದ ಗೌರವ ಪ್ರತಿಷ್ಠೆಯನ್ನು ನುಚ್ಚುನೂರು ಮಾಡುತ್ತಿದೆ. ಇಂತಹ ದುರಹಂಕಾರಿ ಪ್ರಭುತ್ವದ ವಿರುದ್ಧ ಎದೆಗುಂದದೆ ಸಂಘಟಿತರಾಗಿ ಹೋರಾಟವನ್ನು ಮಾಡಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ.

Join Whatsapp
Exit mobile version