Home ಟಾಪ್ ಸುದ್ದಿಗಳು ಸೌದಿಯಲ್ಲಿ ಕರ್ನಾಟಕದ ಯುವಕನ ಸಾವು: ಸಂಶಯ ವ್ಯಕ್ತಪಡಿಸಿದ ಕುಟುಂಬ, ಉನ್ನತ ಮಟ್ಟದ ತನಿಖೆಗೆ ಆಗ್ರಹ

ಸೌದಿಯಲ್ಲಿ ಕರ್ನಾಟಕದ ಯುವಕನ ಸಾವು: ಸಂಶಯ ವ್ಯಕ್ತಪಡಿಸಿದ ಕುಟುಂಬ, ಉನ್ನತ ಮಟ್ಟದ ತನಿಖೆಗೆ ಆಗ್ರಹ

ಸಿಂಧಗಿ: ಕಳೆದ ತಿಂಗಳು ಸೌದಿ ಅರೇಬಿಯಾದ ಬುರೈದ ಪ್ರಾಂತ್ಯದ ಅಲ್ ಅಸಿಯ ಎಂಬಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಸಿಂಧಗಿ ತಾಲೂಕಿನ ಬಸವರಾಜ ನವಿ (35) ಅವರ ಕುಟುಂಬದವರು ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.


ಮೃತದೇಹವನ್ನು ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಹಾಯದೊಂದಿಗೆ ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಬಸವರಾಜ ಸೌದಿಯಲ್ಲಿ ಎರಡು ವರ್ಷಗಳ ಕಾಲ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 12ರಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತಕ್ಷಣ ಭಾರತದ ರಾಯಭಾರಿ ಕಚೇರಿಗೆ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದರು. ಬುರೈದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ವಿಷಯವನ್ನು ತಿಳಿದ ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಘಟಕದ ಅಬ್ದುಲ್ ರಶೀದ್ ಉಚ್ಚಿಲ, ಜಮಾಲುದ್ದೀನ್ ಅಡ್ಡೂರು ಮತ್ತು ಅಮೀನ್ ಪಂಜೋಡಿ ನೇತೃತ್ವದ ತಂಡವು ಕೂಡಲೇ ಮೃತರ ಕುಟುಂಬಿಕರನ್ನು ಸಂಪರ್ಕಿಸಿ ಸಾಮಾಜಿಕ ಕಾರ್ಯಕರ್ತ ಸಲಾಂ ಕೇರಳ ಅವರ ಸಹಕಾರದೊಂದಿಗೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಬೇಕಾದ ದಾಖಲೆಯನ್ನು ಸರಿಪಡಿಸಿ, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಮೃತದೇಹವನ್ನು 02-09-2021 ರಂದು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ಮೃತರ ಊರಾದ ಸಿಂಧಗಿಯ ಮಲಗಾಂವ್ ಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಈ ಕೆಲಸಕ್ಕೆ ಮೃತರ ಕುಟುಂಬದವರು ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಘಟಕಕ್ಕೆ ಧನ್ಯವಾದ ತಿಳಿಸಿದ್ದಾರೆ.


ಆದರೆ ಮೃತರ ಕುಟುಂಬದವರು ಈ ಸಾವಿನ ಬಗ್ಗೆ ಈಗ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಬಸವರಾಜು ಅವರ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಆರ್ಥಿಕವಾಗಿ ಅವರು ಸದೃಢರಾಗಿದ್ದು, ಯಾವುದೇ ಸಾಲ ಇರಲಿಲ್ಲ. ಅವರು ಯಾವಾಗಲೂ ಕುಟುಂಬದ ಸದಸ್ಯರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಅವರು ಯಾವುದೇ ಸಂಕಷ್ಟದಲ್ಲಿ ಇರುವಂತೆ ಕಂಡುಬಂದಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸುವಾಗ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಈ ಬಗ್ಗೆ ಉನ್ನತ ತನಿಖೆ ನಡೆಸಬೇಕು ಎಂದು ಅವರು ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳನ್ನು ಒತ್ತಾಯಿಸಿದ್ದಾರೆ.


ಈ ಬಗ್ಗೆ ಪ್ರಸ್ತುತ ಪೋರ್ಟಲ್, ಇಂಡಿಯನ್ ಸೋಶಿಯಲ್ ಫೋರಂ ಪದಾಧಿಕಾರಿಗಳನ್ನು ಸಂಪರ್ಕಿಸಿದಾಗ, ಬಸವರಾಜ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ನಾವು ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆವು. ಆಗ ಕುಟುಂಬದ ಸದಸ್ಯರು, ಬಸವರಾಜ ಅವರು ಕೌಟುಂಬಿಕ ಕಲಹದಿಂದ ನೊಂದಿದ್ದರು ಎಂದು ಮಾಹಿತಿ ನೀಡಿದ್ದರು. ಮಾತ್ರವಲ್ಲ ಈ ಸಂಬಂಧ ಹೇಳಿಕೆಯನ್ನು ನೋಟರಿ ಮೂಲಕ ರಾಯಭಾರಿ ಕಚೇರಿಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ


Join Whatsapp
Exit mobile version