ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ- ಎನ್ ಇಪಿಯನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ನೀತಿ ಜಾರಿಗೆ ಆತುರ ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಚಿವರು ಎನ್ ಇಪಿ ಜಾರಿ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಶ್ವನಾಥ್ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಇರುವುದು ಅಂಗನವಾಡಿಯಿಂದ ಡಾಕ್ಟರೇಟ್ ಪದವಿ ವರೆಗೆ ಅನ್ವಯವಾಗುತ್ತದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣ ಸಚಿವರನ್ನು ಪರಿಗಣನೆಗೆ ತಗೆದುಕೊಳ್ಳದೆ ನಿರ್ಧಾರ ತೆಗೆದುಕೊಳ್ಳುವಂತಹ ಅತುರ ಏಕೆ ಎಂದು ಅವರು ಪ್ರಶ್ನಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ತಳಪಾಯವಿದ್ದಂತೆ. ಇದನ್ನೇ ನಿರ್ಲಕ್ಷ್ಯ ಮಾಡಬಾರದು. ಆದ್ದರಿಂದ ಈ ಕುರಿತು ರಾಜ್ಯಾದ್ಯಂತ ಎಲ್ಲ ಬಿಇಓ ಮಟ್ಟದಲ್ಲಿ ಚರ್ಚೆ, ವಿಚಾರ ಸಂಕಿರಣ ನಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಪೂರ್ಣ ಪಾಠವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮುದ್ರಣ ಮಾಡಿ, ಶಿಕ್ಷಕರು ಹಾಗೂ ಪೋಷಕರಿಗೆ ಹಂಚಬೇಕು ಎಂದರು.