ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಹಿರಿಯ ದಲಿತ ನಾಯಕ, ಚಿಂತಕ ಪಿ.ಡೀಕಯ್ಯ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಸೋಮವಾರ ಸ್ಮಶಾನದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬೆಳ್ತಂಗಡಿ ಸಹಾಯಕ ಆಯುಕ್ತರು, ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು, ವೈದ್ಯರು ಪದ್ಮುಂಜ ಪೊಯ್ಯದ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಬಳಿಕ ಮೃತದೇಹವನ್ನು ಹೊರಗೆ ತೆಗೆಯಲಾಯಿತು. ಬೆಳ್ತಂಗಡಿ ತಹಶೀಲ್ದಾರ್, ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡೀಕಯ್ಯ ಅವರು ಜುಲೈ 8ರಂದು ನಿಧನರಾಗಿದ್ದರು. ಆದರೆ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಡೀಕಯ್ಯ ಅವರ ಕುಟುಂಬಸ್ಥರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಗೋರಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮಂಚದಿಂದ ಬಿದ್ದ ಡೀಕಯ್ಯರ ತಲೆಯಿಂದ ಅಷ್ಟೊಂದು ನೆತ್ತರು ಹೇಗೆ ಹೋಯಿತು ಹಾಗೂ ಮಣಿಪಾಲದಲ್ಲಿ ಸಾವಿನ ಘೋಷಣೆ ಮಾಡುವವರೆಗೆ ದೇಹವನ್ನು ಡೀಕಯ್ಯರ ಮಿತ್ರರಿಗಾಗಲಿ, ಹತ್ತಿರದವರಿಗಾಗಲಿ ತೋರಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.