Home ಟಾಪ್ ಸುದ್ದಿಗಳು ಕರೆನ್ಸಿ ಚಿಹ್ನೆ ಬದಲಾವಣೆ: ₹ ಚಿಹ್ನೆ ವಿನ್ಯಾಸಗೊಳಿಸಿದ ಉದಯ್ ಕುಮಾರ್ ಹೇಳಿದ್ದೇನು?

ಕರೆನ್ಸಿ ಚಿಹ್ನೆ ಬದಲಾವಣೆ: ₹ ಚಿಹ್ನೆ ವಿನ್ಯಾಸಗೊಳಿಸಿದ ಉದಯ್ ಕುಮಾರ್ ಹೇಳಿದ್ದೇನು?

0

ತಮಿಳುನಾಡು ಸರ್ಕಾರವು 2025–26ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ತನ್ನದೇ ರೂಪಾಯಿ ಚಿಹ್ನೆಯನ್ನು ಪ್ರಕಟಿಸಿದೆ. ಇದು, ಹಿಂದಿ ಹೇರಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಳವಡಿಕೆ ವಿಚಾರವಾಗಿ ಕೇಂದ್ರ ಸರ್ಕಾರದೊಡನೆ ನಡೆಸುತ್ತಿರುವ ಭಾಷಾ ಸಮರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.


ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಬಜೆಟ್ ಲೋಗೋವನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಈ ಬದಲಾವಣೆಯನ್ನು ಪ್ರಕಟಿಸಿದರು. ಈ ಲೋಗೋದಲ್ಲಿ ರೂಪಾಯಿ ಚಿಹ್ನೆಯ ಬದಲು ತಮಿಳು ಅಕ್ಷರ ‘ರು’ ಅನ್ನು ಬಳಸಲಾಗಿದೆ.


ಭಾರತದ ಕರೆನ್ಸಿಯಲ್ಲಿ ಅಳವಡಿಸಿಕೊಳ್ಳಲಾಗಿರುವ ಮೂಲ ಚಿಹ್ನೆ ‘₹’ ಅನ್ನು ವಿನ್ಯಾಸಗೊಳಿಸಿರುವ ಐಐಟಿ ಗುವಾಹಟಿಯ ಪ್ರಾಧ್ಯಾಪಕ ಡಿ. ಉದಯ್ ಕುಮಾರ್ ಅವರು, ಈ ವಿವಾದದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ವಿಶೇಷವೆಂದರೆ, ಅವರು ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆಯ ಮಾಜಿ ಶಾಸಕರ ಮಗ. ಆದಾಗ್ಯೂ, ರಾಜ್ಯ ಸರ್ಕಾರ, ಈ ಚಿಹ್ನೆಗೆ ಕೋಕ್ ನೀಡಿದೆ.


ತಮಿಳುನಾಡು ಸರ್ಕಾರ ತನ್ನದೇ ಚಿಹ್ನೆ ಬಳಸಿರುವುದರಿಂದ ಸೃಷ್ಟಿಯಾಗಿರುವ ವಿವಾದದ ಕುರಿತು ಉದಯ್ ಕುಮಾರ್ ಮಾತನಾಡಿದ್ದಾರೆ.
‘ಈ ವಿಚಾರದಲ್ಲಿ ನನ್ನ ಪ್ರತಿಕ್ರಿಯೇನಿಲ್ಲ. ಸರ್ಕಾರವು ಇದ್ದಕ್ಕಿದ್ದಂತೆ ಬದಲಾವಣೆ ಬಯಸಿ, ತಮ್ಮದೇ ಲಿಪಿಯನ್ನು ಜಾರಿಗೆ ತಂದಿದೆ. ಇದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಅದರ ಬಗ್ಗೆ ನಾನು ಹೇಳುವಂತೆದ್ದೇನೂ ಇಲ್ಲ’ ಎಂದಿದ್ದಾರೆ.


‘ನಾನು ಹುಟ್ಟುವ ಮೊದಲೇ ನನ್ನ ತಂದೆ ಶಾಸಕರಾಗಿದ್ದರು. ಈಗ ಅವರಿಗೆ ವಯಸ್ಸಾಗಿದ್ದು, ಹಳ್ಳಿಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನನ್ನ ತಂದೆಯವರು ಡಿಎಂಕೆಯಿಂದಲೇ ಶಾಸಕರಾಗಿದ್ದರು. ಈಗ ಅದೇ ಪಕ್ಷದವರು ಚಿಹ್ನೆ ಬದಲಿದ್ದಾರೆ. ಇದು ಕಾಕತಾಳೀಯವಷ್ಟೇ. ಬಹುಶಃ, ನಾನು ಬೇರೆಯವನಾಗಿದ್ದರೂ, ಹೀಗೆ ಆಗುತ್ತಿತ್ತೇನೋ’ ಎಂದು ಅಭಿಪ್ರಾಯಪಟ್ಟಿದ್ದಾರೆ.


ವಿನ್ಯಾಸಕಾರನಿಗೆ ಬಹುಮಾನ ಕೊಟ್ಟಿದ್ದ ಕಾಂಗ್ರೆಸ್
ಉದಯ ಕುಮಾರ್ ಅವರು ಪ್ರಸ್ತುತ ಐಐಟಿ ಗುವಾಹಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 2010 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ರೂಪಾಯಿಗೆ ಪ್ರತ್ಯೇಕ ಚಿಹ್ನೆ ರಚಿಸಲು ಸ್ಪರ್ಧೆ ಏರ್ಪಡಿಸಿದಾಗ, ಉದಯ ಕುಮಾರ್ ಅವರ ವಿನ್ಯಾಸವನ್ನು ಆಯ್ಕೆ ಮಾಡಲಾಗಿತ್ತು. ದೇಶಾದ್ಯಂತ ಸುಮಾರು 3,000 ಮಂದಿ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಆಯ್ಕೆಯಾದ ಏಕೈಕ ವಿನ್ಯಾಸ ಅವರದ್ದಾಗಿತ್ತು. ಈ ಸಾಧನೆಗಾಗಿ ಅವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನೂ ನೀಡಲಾಗಿತ್ತು.

‘₹’ ಚಿಹ್ನೆ ವಿನ್ಯಾಸಕ ಉದಯ್‌ ಕುಮಾರ್‌ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

  • ಐಐಟಿ ಗುವಾಹಟಿಯಲ್ಲಿ ಪ್ರಾಧ್ಯಾಪಕರಾಗಿರುವ ಉದಯ್‌ ಕುಮಾರ್‌ ಧರ್ಮಲಿಂಗಮ್‌ ಅವರು ವಿನ್ಯಾಸಗೊಳಿಸಿರುವ ‘₹’ ಚಿಹ್ನೆಯನ್ನು 2010ರಲ್ಲಿ ಭಾರತದ ಕರೆನ್ಸಿಗೆ ಅಳವಡಿಸಿಕೊಳ್ಳಲಾಯಿತು. ಅಂತಿಮ ಪಟ್ಟಿಯಲ್ಲಿ ಒಟ್ಟು ಐದು ಚಿಹ್ನೆಗಳಿದ್ದವು.
  • ಉದಯ್‌ ಕುಮಾರ್‌ ಅವರ ತಂದೆ ಎನ್‌. ಧರ್ಮಲಿಂಗಮ್‌ ಅವರು 1971ರ ವಿಧಾನಸಭೆ ಚುನಾವಣೆಯಲ್ಲಿ ರಿಶಿವಂದಿಯಮ್‌ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿದ್ದರು.
  • ಚೆನ್ನೈನ ಲಾ ಚಾಟೆಲೈನ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಉದಯ್‌, 2001ರಲ್ಲಿ ಅಣ್ಣಾ ವಿಶ್ವ ವಿದ್ಯಾಲಯದಿಂದ ವಾಸ್ತುಶಿಲ್ಪ ವಿಷಯದಲ್ಲಿ ಪದವಿ ಪಡೆದಿದ್ದಾರೆ.
  • ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದಿಂದ ದೃಶ್ಯ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಅಲ್ಲಿಯೇ ಅದೇ ವಿಷಯದ ಮೇಲೆ ಪಿಎಚ್‌ಡಿ ಮಾಡಿದ್ದಾರೆ.
  • ₹ ಚಿಹ್ನೆಯ ಅರ್ಥವೇನು?
  • ಈ ಚಿಹ್ನೆಯು ದೇವನಾಗರಿ ಲಿಪಿಯ ‘र’ (ರ) ಮತ್ತು ಇಂಗ್ಲಿಷ್‌ನ ‘R’ ಅಕ್ಷರಗಳನ್ನು ಸಂಯೋಜಿಸುವ ಮೂಲಕ ಭಾರತೀಯ ರೂಪಾಯಿಯನ್ನು ಪ್ರತಿನಿಧಿಸುತ್ತದೆ. ಚಿಹ್ನೆಯ ಮೇಲ್ಭಾಗದಲ್ಲಿರುವ ಎರಡು ಸಮಾನಾಂತರ ರೇಖೆಗಳು ಭಾರತೀಯ ಧ್ವಜ ಮತ್ತು ಸಮಾನತೆಯನ್ನು ಸೂಚಿಸುತ್ತವೆ.

NO COMMENTS

LEAVE A REPLY

Please enter your comment!
Please enter your name here

Exit mobile version