ಮ್ಯಾಂಚೆಸ್ಟರ್: ದಿಗ್ಗಜ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮುಖ್ಯ ಕೋಚ್ ಎರಿಕ್ ಟೆನ್ ಹ್ಯಾಗ್ ನಡುವಿನ ವೈಮನಸ್ಸು ಮತ್ತೊಮ್ಮೆ ಬಯಲಾಗಿದೆ.
ಟೊಟೆನ್‌ಹ್ಯಾಮ್ ವಿರುದ್ಧ ತವರು ಮೈದಾನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಕೋಚ್ ಎರಿಕ್ ಟೆನ್ ಹ್ಯಾಗ್, ರೊನಾಲ್ಡೊರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟಿದ್ದರು. ಬದಲಿ ಆಟಗಾರನಾಗಿಯೂ ಪಂದ್ಯದ ನಡುವೆ ಮೈದಾನಕ್ಕಿಳಿಯಲು ರೊನಾಲ್ಡೊಗೆ ಕೋಚ್ ಅವಕಾಶ ನೀಡಲಿಲ್ಲ. ಇದರಿಂದ ಕುಪಿತನಾದ ರೊನಾಲ್ಡೊ, ಪಂದ್ಯ ಮುಗಿಯುವ ಮುನ್ನವೇ ಆಟಗಾರರ ಸ್ಟ್ಯಾಂಡ್‌ನಿಂದ ಇಳಿದು ಟನಲ್‌ನತ್ತ ತೆರಳಿದ್ದಾರೆ. ರೊನಾಲ್ಡೊ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಜುವೆಂಟಸ್ ಕ್ಲಬ್‌ನಲ್ಲಿದ್ದ ಕ್ರಿಸ್ಟಿಯಾನೋ ರೊನಾಲ್ಡೊ, 2021ರ ಆಗಸ್ಟ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದೊಂದಿಗೆ ಎರಡು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಓಲೆ ಗುನ್ನಾರ್ ಸೋಲ್ಸ್‌ಜೇರ್ ಮತ್ತು ರಾಲ್ಫ್ ರಾಂಗ್ನಿಕ್ ಸ್ಥಾನಕ್ಕೆ ಎರಿಕ್ ಟೆನ್ ಹ್ಯಾಗ್ ನೇಮಕವಾದ ಬಳಿಕ ತಂಡದ ಸಂಯೋಜನೆಯಲ್ಲಿ ರೊನಾಲ್ಡೊಗೆ ಸ್ಥಾನ ಸಿಗುತ್ತಿಲ್ಲ. ಪ್ರಮುಖ ಪಂದ್ಯಗಳಿಂದಲೂ ರೊನಾಲ್ಡೊರನ್ನು ಹೊರಗಿಡಲಾಗುತ್ತಿದೆ.
ಸಮ್ಮರ್ ಟ್ರಾನ್ಸ್‌ಫರ್ ಅವಧಿಯಲ್ಲಿ ಚೆಲ್ಸಿಯಾ ಸೇರಿದಂತೆ ತಂಡ ಬದಲಾಯಿಸಲು ರೊನಾಲ್ಡೊ ಪ್ರಯತ್ನಿಸಿದ್ದರಾರೂ ಯಶಸ್ವಿಯಾಗಿರಲಿಲ್ಲ. ಚಾಂಪಿಯನ್ಸ್ ಲೀಗ್ ಆಡುವ ಬಯಕೆ ಹೊಂದಿದ್ದ ರೊನಾಲ್ಡೊ, ಯುಸಿಎಲ್‌ಗೆ ಅರ್ಹತೆ ಪಡೆದಿದ್ದ ಕೆಲ ಕ್ಲಬ್‌ಗಳ ಜೊತೆ ನಡೆಸಿದ ಮಾತುಕತೆ ವಿಫಲವಾಗಿತ್ತು.
ಟೊಟೆನ್‌ಹ್ಯಾಮ್ ವಿರುದ್ಧ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು. 47ನೇ ನಿಮಿಷದಲ್ಲಿ ಫ್ರೆಡ್ ಮತ್ತು ಬ್ರೂನೋ ಫೆರ್ನಾಂಡಿಸ್ 69ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯ ತಂದಿತ್ತರು. ಈ ಗೆಲುವಿನೊಂದಿಗೆ ಯುನೈಟೆಡ್, ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.