‘ಉರಿಗೌಡ – ನಂಜೇಗೌಡ’ ಮಹಾದ್ವಾರ ಫಲಕ ತೆರವುಗೊಳಿಸಿ, ಮಂಡ್ಯ ಶಾಂತವಾಗಿರಲು ಕ್ರಮಕೈಗೊಳ್ಳಿ: ಜಿಲ್ಲಾಡಳಿತಕ್ಕೆ ಸಿಪಿಐ(ಎಂ) ಒತ್ತಾಯ

Prasthutha|

ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ  ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಎಂಬ ಹೆಸರುಗಳಲ್ಲಿ ಹಾಕಿರುವ ಮಹಾದ್ವಾರ ಫಲಕಗಳನ್ನು ಕೂಡಲೇ ತೆರೆವುಗೊಳಿಸಿ ಜಿಲ್ಲೆಯನ್ನು ಕೋಮು ದಳ್ಳುರಿಗೆ ತಳ್ಳುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದು ಮಂಡ್ಯ ಜಿಲ್ಲಾಡಳಿತವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.

- Advertisement -

ಸದರಿ ಫಲಕದಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನು ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂತಹ ಕೋಮುವಾದಿ ಮತ್ತು ಸುಳ್ಳಿನ ಭಿತ್ತಿಚಿತ್ರಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಆಶಯಗಳ ಉಲ್ಲಂಘನೆಯಾಗುತ್ತದೆ. ಬಿಜೆಪಿ ಮತ್ತು ಸಂಘ ಪರಿವಾರದ ಕೋಮುವಾದಿ ಉದ್ದೇಶವನ್ನು ಈಡೇರಿಸಿಕೊಳ್ಳಲು ಇಂಥವುಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಸಿಪಿಐ(ಎಂ) ಪಕ್ಷವು ಹೇಳಿದೆ.

ಉರೀಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ಸೈನಿಕರು ಎಂದು ಸುಳ್ಳು ಕತೆ ಕಟ್ಟಿ ಒಕ್ಕಲಿಗರನ್ನು ಟಿಪ್ಪು ವಿರುದ್ಧ ಹೋರಾಡಿ ಬ್ರಿಟೀಷರಿಗೆ ಸಹಾಯ ಮಾಡಿದರು ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಅವಮಾನಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿದೆ. ಇದರ ಮುಂದವರಿಕೆಯಾಗಿ ಪ್ರಧಾನಿಯೊಬ್ಬರ ಭೇಟಿಯ ಘನತೆಯನ್ನೂ ಮಣ್ಣು ಪಾಲು ಮಾಡಿ ತನ್ನ ಸುಳ್ಳಿನ, ವಿಕೃತಿಯ ಪ್ರಚಾರದಲ್ಲಿ ಬಿಜೆಪಿ ನಿರತವಾಗಿದೆ. ಜಿಲ್ಲಾಡಳಿತ ಇಂದು ಸಂಜೆಯೊಳಗೆ ಈ ವಿವಾದಾತ್ಮಕ, ವಿಕೃತ ದ್ವಾರ ಫಲಕವನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಸಿಪಿಐ(ಎಂ) ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನು ನಾಳೆಯೇ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

- Advertisement -

ಜಿಲ್ಲಾಡಳಿತ ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫಲಕವನ್ನು ತೆರೆವುಗೊಳಿಸಬೇಕೆಂದು ಸಿಪಿಐ(ಎಂ) ಮಂಡ್ಯ ಜಿಲ್ಲಾ ಸಮಿತಿಯು ಆಗ್ರಹಿಸಿದೆ.

Join Whatsapp
Exit mobile version