ನವದೆಹಲಿ : ಖಾಸಗಿ ಆಸ್ಪತ್ರೆಗಳು ತಾರಾ ಹೋಟೆಲ್ ಗಳ ಸಹಯೋಗದೊಂದಿಗೆ ಲಸಿಕೆ ನೀಡುವ ಪ್ಯಾಕೇಜ್ ಘೋಷಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಯ ಲಸಿಕಾ ಕೇಂದ್ರ, ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ, ಅಪಾರ್ಟ್ ಮೆಂಟ್ ಸೊಸೈಟಿ ಸಮುಚ್ಛಯ, ಪಂಚಾಯತ್, ಹಿರಿಯ ನಾಗರಿಕರ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲು ರಾಷ್ಟ್ರೀಯ ಲಸಿಕೆ ಯೋಜನೆಯಲ್ಲಿ ನಿರ್ದೇಶಿಸಲಾಗಿದೆ.
ಆದರೆ, ಕೆಲವೊಂದು ತಾರಾ ಹೋಟೆಲ್ ಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಲಸಿಕೆ ನೀಡಲು ಮುಂದಾಗಿರುವುದು ಕಂಡುಬಂದಿದೆ. ಅಂತಹ ವ್ಯವಸ್ಥೆಗೆ ಅವಕಾಶವಿಲ್ಲ. ಹಾಗೆ ಕಂಡುಬಂದರೆ ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.