ನವದೆಹಲಿ : ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಿದ್ದ ಸಂದರ್ಭದಲ್ಲೇ ಜೂ.5ರಂದು ಕೇಂದ್ರ ಸರಕಾರ ಹೊಸ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಜಾರಿಗೊಳಿಸಿತ್ತು. ಇದೀಗ ವಿವಾದಿತ ಕೃಷಿ ಕಾನೂನುಗಳು ಜಾರಿಗೊಂಡು ಜೂ.5ರಂದು ಒಂದು ವರ್ಷವಾಗಲಿದೆ. ಹೀಗಾಗಿ, ಈ ವಾರ್ಷಿಕ ದಿನದಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು, ಶಾಸಕರ ಕಚೇರಿಗಳ ಮುಂದೆ ʼಸಂಪೂರ್ಣ ಕ್ರಾಂತಿ ದಿನʼವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಸಂಯುಕ್ತ ಮೋರ್ಚಾ ಕರೆ ನೀಡಿದೆ. ಬಿಜೆಪಿ ಸಂಸದರು, ಶಾಸಕರ ಕಚೇರಿ ಮುಂದೆ ವಿವಾದಿತ ಕಾನೂನು ಪ್ರತಿಗಳನ್ನು ಸುಡುವಂತೆ ಕರೆ ನೀಡಲಾಗಿದೆ.
ಸುಗ್ರೀವಾಜ್ಞೆಗಳ ಮೂಲಕ ಈ ಕಾನೂನು ಜಾರಿಗೊಳಿಸಲಾಗಿತ್ತು. ಸೆಪ್ಟಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಈ ಕಾನೂನಿನ ವಿರುದ್ಧ ರೈತರು ಕಳೆದ ಸೆಪ್ಟಂಬರ್ ನಿಂದಲೇ ಪ್ರತಿಭಟನೆ ನಡೆಸುತ್ತಿದ್ದರೂ, ಬಿಜೆಪಿ ಸರಕಾರ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ನವೆಂಬರ್ ನಿಂದ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.