ಬೆಂಗಳೂರು: ಜನರಿಗೆ ಲಸಿಕೆ ನೀಡದ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಗೆ ಸಿದ್ಧಗೊಳ್ಳುತ್ತಿರುವಂತಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕರೋನಾಗೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್ ಅಲ್ಲ. ಆದರೆ ಲಸಿಕೆ ಕೊಡಲಾಗದ ರಾಜ್ಯ ಸರ್ಕಾರ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್‌ಗೆ ಸಿದ್ಧಗೊಳ್ಳುತ್ತಿರುವಂತಿದೆ. ಒಂದು ವಾರದ ಲಾಕ್‌ಡೌನ್‌ನಿಂದಾಗುವ ನಷ್ಟದ ಮೊತ್ತದಲ್ಲಿಯೇ ಸರ್ವರಿಗೂ ಲಸಿಕೆ ಕೊಡಬಹುದು! ಲಸಿಕೆ ಕೊಡಲಾಗದ ತಮ್ಮ ವೈಫಲ್ಯಕ್ಕೆ ಜನರನ್ನ ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದೆ.
ಕರೋನಾ 3ನೇ ಅಲೆಯ ಆತಂಕ, ಲಸಿಕೆ ನೀಡುವಿಕೆಯಲ್ಲಿ ವೈಫಲ್ಯ. ಇದ್ಯಾವುದನ್ನೂ ಗಮನಿಸದ ಬಿಜೆಪಿ ಸರ್ಕಾರ ಖಾತೆ ಕಿತ್ತಾಟ, ಮೂಲ vs ವಲಸಿಗರ ರಂಪಾಟದಲ್ಲಿ ನಿರತವಾಗಿದೆ. ಕಳೆದ 2 ವರ್ಷವನ್ನೂ ಹೀಗೆಯೇ ಕಳೆಯಿತು, ಮುಂದೆಯೂ ಹೀಗೆಯೇ ಕಳೆಯಲಿದೆ. ಅಧಿಕಾರಕ್ಕಾಗಿ ದೆಹಲಿಗೆ ಓಡುವ ಬಿಜೆಪಿಗರು ಲಸಿಕೆಗೆ ಬೇಡಿಕೆ ಇಡಲು ಓಡುವುದಿಲ್ಲ ಏಕೆ? ಎಂದು ಕಿಡಿಕಾರಿದೆ.