ವೇಣೂರು: ದಿಢೀರ್ ಆಗಿ ಮನೆಯಂಗಳದಿಂದ ನಾಪತ್ತೆಯಾಗಿದ್ದ ಹೆಣ್ಣು ಮಗುವಿನ ಮೃತದೇಹ ಮನೆ ಸಮೀಪದ ಹೊಳೆ ನೀರಿನಲ್ಲಿ ಇಂದು(ಬುಧವಾರ) ಬೆಳಿಗ್ಗೆ ಪತ್ತೆಯಾಗಿದೆ.
ಮೃತಪಟ್ಟ ಮಗುವನ್ನು ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ಮೂಲದ ಸುಚಿತ್ರಾ-ಸುಭಾಷ್ ದಂಪತಿಯ ಎರಡೂವರೆ ವರ್ಷದ ಮಗು ಧೃತ್ವಿ ಎಂದು ಗುರುತಿಸಲಾಗಿದೆ.
ಸುಚಿತ್ರಾ ಅವರು ಮಗುವನ್ನು ನಿನ್ನೆ(ಮಂಗಳವಾರ) ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ಹುಲ್ಲುತರಲೆಂದು ಸನಿಹದ ತೋಟಕ್ಕೆ ತೆರಳಿದ್ದು, ಹಿಂತಿರುಗಿ ಬರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು ಎನ್ನಲಾಗಿದೆ. ನಂತರ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿರಲಿಲ್ಲ.
ನಂತರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಅಗ್ನಿಶಾಮಕ ದಳ, ವಿವಿಧ ಕಡೆಯ ಮುಳುಗು ತಜ್ಞರು ಹಾಗೂ ಸ್ಥಳೀಯರು ತಡರಾತ್ರಿಯವರೆಗೂ ಹೊಳೆ ನೀರಿನಲ್ಲಿ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿರಲಿಲ್ಲ. ಬಳಿಕ ಇಂದು(ಬುಧವಾರ) ಬೆಳಿಗ್ಗೆಯೂ ಕಾರ್ಯಾಚರಣೆ ಮುಂದುವರಿಸಿದಾಗ ಮನೆಯಿಂದ 500ಮೀ. ಅಂತರದ ಹೊಳೆನೀರಿನಲ್ಲಿ ಮೃತದೇಹ ಪತ್ತೆಯಾಗಿದೆ.