Home ಕರಾವಳಿ ರಾಜ್ಯ ಸರ್ಕಾರ ವಜಾಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ದೂರು: ಬಿ.ವೈ.ವಿಜಯೇಂದ್ರ

ರಾಜ್ಯ ಸರ್ಕಾರ ವಜಾಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ದೂರು: ಬಿ.ವೈ.ವಿಜಯೇಂದ್ರ

ಬಂಟ್ವಾಳ: ‘ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶೀಘ್ರವೇ ಭೇಟಿ ಮಾಡಿ ರಾಜ್ಯದಲ್ಲಿರುವ ಹಿಂದೂ ವಿರೋಧಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.


ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಒಂದೂವರೆ ವರ್ಷದಲ್ಲೇ ಜನ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಅಹಿಂದ ಮಂತ್ರ ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟ ಹಣ ದೋಚಿದ್ದಾರೆ. ನಿಗಮದಲ್ಲಿ ₹ 87 ಕೋಟಿ ಹಗರಣ ಆಗಿದೆ ಎಂದು ಮುಖ್ಯಮಂತ್ರಿಯವರು ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣ ನಡೆದೇ ಇಲ್ಲ ಎನ್ನುತ್ತಿದ್ದ ಅವರು ಈಗ ಪರಿಹಾರವನ್ನೂ ಪಡೆಯದೇ ಬೇಷರತ್ತಾಗಿ ನಿವೇಶನ ವಾಪಾಸ್ ಮಾಡಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.


‘ರಾಜ್ಯ ಸರ್ಕಾರ ಒಂದೂವರೆ ವರ್ಷದಲ್ಲಿ ಒಂದೇ ಒಂದು ಹೊಸ ಯೋಜನೆ ಘೋಷಣೆ ಮಾಡಿಲ್ಲ. ಯಾವ ಶಾಸಕರೂ ಒಂದೇ ಒಂದು ಗುದ್ದಲಿ ಪೂಜೆ ಮಾಡಲು ಸಾಧ್ಯವಾಗಿಲ್ಲ. ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅವರೇ ಇದನ್ನು ಬಹಿರಂಗವಾಗಿ ಹೇಳಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರವಿದು’ ಎಂದರು.

Join Whatsapp
Exit mobile version