Home ಟಾಪ್ ಸುದ್ದಿಗಳು ನ್ಯಾಯಯುತ ತೆರಿಗೆ ಪಾಲಿಗಾಗಿ ಹಣಕಾಸಿನ ಸ್ವಾತಂತ್ರ ಸಂಗ್ರಾಮ ನಡೆಯಬೇಕು : ಯು.ಟಿ ಫರ್ಝನಾ

ನ್ಯಾಯಯುತ ತೆರಿಗೆ ಪಾಲಿಗಾಗಿ ಹಣಕಾಸಿನ ಸ್ವಾತಂತ್ರ ಸಂಗ್ರಾಮ ನಡೆಯಬೇಕು : ಯು.ಟಿ ಫರ್ಝನಾ

ಮಂಗಳೂರು : ತೆರಿಗೆ ಪಾಲಿನ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಣಕಾಸಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು ಎಂದು ಕೆಪಿಸಿಸಿ ವಕ್ತಾರೆ ಯು.ಟಿ ಫರ್ಝನಾ ಅಶ್ರಫ್ ಕರೆ ನೀಡಿದರು. `ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟಕ್ಕೆ ಎಲ್ಲರೂ ಕೈಜೋಡಿಸಿಸಬೇಕು, ಪಕ್ಷಾತೀತವಾಗಿ ಧ್ವನಿಗೂಡಿಸಬೇಕು, ನ್ಯಾಯಯುತವಾದ ಬೇಡಿಕೆ ಈಡೇರಿಸಿಕೊಳ್ಳಲು ಸಂಘಟಿತ ಮತ್ತು ಶಾಂತಿಯುತಯುತವಾದ ಆಗ್ರಹಪೂರ್ವಕ ಹೋರಾಟ ನಡೆಯಬೇಕು ಎಂದು ಹೇಳಿದರು.


ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯು.ಟಿ ಫರ್ಝನಾ, ದೇಶದ ಜನಸಂಖ್ಯೆಯಲ್ಲಿ ಶೇಕಡಾ 4ರಷ್ಟು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯ ದೇಶದ ಜಿಡಿಪಿಗೆ ಶೇಕಡಾ 9.6ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದೆ. ಹೀಗಿದ್ದರೂ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಮೋಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


14ನೇ ಹಣಕಾಸಿನ ಆಯೋಗದಲ್ಲಿ ಕರ್ನಾಟಕಕ್ಕೆ ಶೇಕಡಾ 4.7ರಷ್ಟು ತೆರಿಗೆ ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸಿನ ಆಯೋದಲ್ಲಿ ಅದನ್ನು ಶೇಕಡಾ 3.6ಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ನೀಡಿರುವ 1,78,193 ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರದಲ್ಲಿ ಉತ್ತರ ಪ್ರದೇಶಕ್ಕೆ 31,000 ಕೋಟಿ ರೂಪಾಯಿ ಅನುದಾನ ನೀಡಿರುವಾಗ ಕರ್ನಾಟಕಕ್ಕೆ ಕೇವಲ 6,498 ಕೋಟಿ ನೀಡಲಾಗಿದೆ. ಕರ್ನಾಟಕ ಕೇಂದ್ರಕ್ಕೆ 1 ರೂಪಾಯಿ ನೀಡಿದರೆ ನಮಗೆ 14 ಪೈಸೆ ಮಾತ್ರ ವಾಪಸ್ ಸಿಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಹಣಕಾಸು ಸಹಾಯ ಮಾಡಬೇಕು ಎಂಬ ಹಣಕಾಸು ಆಯೋಗದ ತೀರ್ಮಾನದಿಂದ ಕರ್ನಾಟಕಕ್ಕೆ ಮೋಸ ಆಗುತ್ತಿದೆ ಎಂದರು.


ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ನಲ್ಲಿ ಘೋಷಿಸಿದ್ದ 5,495 ಕೋಟಿ ರೂಪಾಯಿ ಪರಿಹಾರ ಕೊಟ್ಟಿಲ್ಲ, ಬೆಂಗಳೂರು ಫೆರಿಫೆರಲ್ ರಸ್ತೆ ಮತ್ತು ನೀರಾವರಿ ಯೋಜನೆಗಳಿಗೆ ಘೋಷಿಸಿದ್ದ ಸುಮಾರು 6,000 ಕೋಟಿ ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ, 2021ರಲ್ಲಿ ನೆರೆ ಬಂದಾಗ ಕರ್ನಾಟಕದ 7,476 ಕೋಟಿ ರೂಪಾಯಿ ಪರಿಹಾರ ಕೇಳಿದಾಗ ಕೇವಲ 960 ಕೋಟಿ ರೂಪಾಯಿ ಪರಿಹಾರ ನೀಡಿದ್ದರು. ಕರ್ನಾಟಕ ನಿರ್ನಾಮ ಆಗುವ ರೀತಿಯಲ್ಲಿ ಕೇಂದ್ರ ಸರ್ಕಾರವು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.


ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಮೀಸಲಿಟ್ಟಿದ್ದ ಹಣದಲ್ಲಿ ಕರ್ನಾಟಕಕ್ಕೆ ನಯಾಪೈಸೆ ಅನುದಾನ ನೀಡದ ಕೇಂದ್ರ ಸರ್ಕಾರದ ಅದರ ಜಾಹಿರಾತಿ ಶೇಕಡಾ 85ರಷ್ಟು ಅನುದಾನವನ್ನು ಬಳಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು. ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು, ಕೇಂದ್ರದಿಂದ ಕರ್ನಾಟಕಕ್ಕೆ ಸಿಗಬೇಕಿರುವ 78 ಸಾವಿರ ಕೋಟಿ ರೂಪಾಯಿ ತೆರಿಗೆ ಪಾಲಿನ ವಿಚಾರದಲ್ಲಿ ಮೌನವಾಗಿದ್ದಾರೆ ಎಂದು ಅವರು ಟೀಕಿಸಿದರು.


ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ 19 ಮಂದಿ ಎನ್ ಡಿಎ ಸಂಸದರು ಧ್ವನಿ ಎತ್ತಬೇಕು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬಾಕಿ ಉಳಿಸಿಕೊಂಡಿರುವ 73 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಮತ್ತು ಹಣಕಾಸು ಆಯೋಗದ ಸಹಾಯಧನ ಸಿಕ್ಕರೆ ರಾಜ್ಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂದು ಯು.ಟಿ ಫರ್ಝನಾ ಹೇಳಿದರು.

Join Whatsapp
Exit mobile version