►ಅಂತಿಮ ವಿಧಿವಿಧಾನ ನೆರವೇರಿಸಿದ ಸೋಶಿಯಲ್ ಫೋರಮ್
ಮಸ್ಕತ್: ಒಮಾನ್ ನ ಸೂರ್ ಎಂಬಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಉಡುಪಿಯ ಮಜೂರು ನಿವಾಸಿ ಹಾಜಬ್ಬ ಉಮರಬ್ಬ ಬ್ಯಾರಿ ಎಂಬವರ ಪುತ್ರ ಮಯ್ಯದ್ದಿ ಮಜೂರು (46) ಹೃದಯಾಘಾತಕ್ಕೊಳಗಾಗಿ ಮೇ 30ರಂದು ಮೃತಪಟ್ಟಿದ್ದಾರೆ. ಸುಮಾರು 7 ವರ್ಷಗಳಿಂದ ಒಮಾನ್ ನಲ್ಲಿ ಉದ್ಯೋಗ ಹೊಂದಿದ್ದ ಮಯ್ಯದ್ದಿ ಅವರು ಮೀನು ಮಾರಾಟ ಮಾರುಕಟ್ಟೆಯಲ್ಲಿ ವೃತ್ತಿಯಲ್ಲಿದ್ದರು. ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ತನ್ನ ಕೊಠಡಿಯಲ್ಲಿ ವಿಶ್ರಾಂತಿಯಲ್ಲಿದ್ದ ಮಯ್ಯದ್ದಿ ಹಠಾತ್ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಮರಣ ಹೊಂದಿದರು.
ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಮೃತದೇಹವನ್ನು ಒಮಾನ್ ನಲ್ಲಿಯೇ ದಫನ ಮಾಡುವ ಬಗ್ಗೆ ಕುಟುಂಬಿಕರು ತೀರ್ಮಾನಿಸಿದ್ದರು. ಅದಕ್ಕೆ ಅಗತ್ಯ ಇರುವ ಎಲ್ಲ ದಾಖಲೆ ಪತ್ರಗಳನ್ನು ಸೋಶಿಯಲ್ ಫೋರಮ್ ಒಮಾನ್ ತಂಡವು ಒದಗಿಸಿಕೊಟ್ಟು ಅಂತಿಮ ವಿಧಾನವನ್ನು ನೆರವೇರಿಸಿಕೊಟ್ಟಿತು. ಜೂನ್ 2ರಂದು ಸಂಜೆ 6 ಗಂಟೆಗೆ ಮಸ್ಕತ್ ನ ಅಮರಾತ್ ದಫನ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕಾರ್ಯದಲ್ಲಿ ಮಜೂರು ನಿವಾಸಿ ಉಮರಬ್ಬ, ಸೋಶಿಯಲ್ ಫೋರಮ್ ನ ಸದಸ್ಯರಾದ ಸುಹಾಝ್, ಶಬೀರ್, ಅನ್ವರ್ ಕಾಪು, ಖಲೀಲ್ ಕಾಪು, ಆಸಿಫ್ ಬೈಲೂರ್, ಹುಸೈನ್, ಶಾಹಿದ್ ಮುಂತಾದವರು ಪಾಲ್ಗೊಂಡಿದ್ದರು.