Home ಟಾಪ್ ಸುದ್ದಿಗಳು ಕರಾವಳಿ ತ್ರಿವಳಿ ಕೊಲೆ; ವಿಧಾನಮಂಡಲ ಅಧಿವೇಶನ ಕರೆಯಲು ಕುಮಾರಸ್ವಾಮಿ ಆಗ್ರಹ

ಕರಾವಳಿ ತ್ರಿವಳಿ ಕೊಲೆ; ವಿಧಾನಮಂಡಲ ಅಧಿವೇಶನ ಕರೆಯಲು ಕುಮಾರಸ್ವಾಮಿ ಆಗ್ರಹ

ರಾಮನಗರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಸರಣಿ ಕೊಲೆಗಳು, ಅಪರಾಧಗಳಿಂದ ಇಡೀ ರಾಜ್ಯ ತತ್ತರಿಸಿದ್ದು, ಜನರು ಭಯದಲ್ಲಿ ಬದುಕುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ರಾಜ್ಯ ಸರಕಾರ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಬಿಡದಿಯ ತಮ್ಮ ತೋಟದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಶಾಂತಿ ಭದ್ರತೆಗಳ ವ್ಯವಸ್ಥೆ ಹದಗೆಟ್ಟಿರುವುದು ಒಂದೆಡೆಯಾದರೆ, ಮಳೆ-ಪ್ರವಾಹದಿಂದ ಜನರ ಪರಿಸ್ಥಿತಿ ಭೀಕರವಾಗಿದೆ. ಈ ಬಗ್ಗೆ ಕಲಾಪದಲ್ಲಿ ಚರ್ಚೆ ನಡೆಸಿ ತಕ್ಷಣ ಜನರ ನೆರವಿಗೆ ಧಾವಿಸಬೇಕಿದೆ ಎಂದರು.

ಸರಕಾರ ಸಂಪೂರ್ಣ ವಿಫಲ:

ನಾನು ಸೋಮವಾರ ಕರಾವಳಿಗೆ ತೆರಳಿ, ಕೊಲೆಗೀಡಾಗಿದ್ದ ಮೂವರು ಯುವಕರ ಮನೆಗಳಿಗೆ ಭೇಟಿ ನೀಡಿದ್ದೆ. ಆ ಕುಟುಂಬಗಳು ತೀವ್ರ ಭೀತಿಯಲ್ಲಿವೆ. ಮನೆಯವರು ಒಬ್ಬೊಬ್ಬರಾಗಿ ಹೊರಗೆ ಬರಲು ಹೆದರುತ್ತಿದ್ದಾರೆ. ಕರಾವಳಿಯಲ್ಲಿನ ಸರಣಿ ಕೊಲೆಗಳು ಬೆಚ್ಚಿಬೀಳಿಸಿವೆ. ಆದರೆ ರಾಜ್ಯ ಬಿಜೆಪಿ ಸರಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸರಕಾರ ವೈಫಲ್ಯಗಳೇ ಸಮಸ್ಯೆಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಜ್ಞಾನೇಂದ್ರ ಅವರಿಗೆ ‌ನಾಚಿಗೆ ಆಗಬೇಕು. ಗೃಹ ಸಚಿವರಾಗಲು ಅವರು ಸಮರ್ಥರಲ್ಲ. ಅವರಿಗೆ ಮನುಷ್ಯತ್ವ ಇಲ್ಲ. ಫಾಝಿಲ್ ಕುಟುಂಬ ಏನು ತಪ್ಪು ಮಾಡಿತ್ತು? 18 ಜನರ ಜೀವ ಉಳಿಸಿದವನು ಆ ಯುವಕ. ಅವನ ಹತ್ಯೆ ಮಾಡಿದರೂ ಪರಿಹಾರ ನೀಡಿಲ್ಲ. ಈ ಹತ್ಯೆಗಳ ತನಿಖೆ ಪೂರ್ಣಗೊಂಡಿಲ್ಲ. ಗೃಹ ಸಚಿವರ ಹೇಳಿಕೆಯೇ ಸರಿ ಇಲ್ಲ. ಹಾಗೆಯೇ; ಬೆಳ್ಳಾರೆ ಮಸೂದ್ ಹತ್ಯೆಯನ್ನು ಪೊಲೀಸರು ತಡೆಯಬಹುದಿತ್ತು. ಪ್ರವೀಣ್‌ ನೆಟ್ಟಾರೆಯನ್ನೂ ಉಳಿಸಬಹುದಿತ್ತು. ದುರಂತವೆಂದರೆ; ಫಾಝಿಲ್ ಹತ್ಯೆ ಬಗ್ಗೆ ಪೊಲೀಸರಿಗೆ ಘಟನೆ ನಡೆದ ದಿನದ ಮಧ್ಯಾಹ್ನದಿಂದಲ್ಲೇ ಮಾಹಿತಿ ಇದ್ದರೂ, ಅವರು ತಲೆ ಕೆಡಿಸಿಕೊಂಡಿಲ್ಲ. ಇಲಾಖೆಯನ್ನು ಹಾಳು ಮಾಡಿದ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಸಚಿವ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜನರಿಗೆ ನೆಮ್ಮದಿ ಇಲ್ಲದಾಗಿದೆ:

ಕರಾವಳಿ ಮಾತ್ರವಲ್ಲ, ರಾಜ್ಯದ ಯಾವುದೇ ಭಾಗದಲ್ಲಿಯೂ ಜನರು ನೆಮ್ಮದಿಯಿಂದ ಬಾಳುತ್ತಿಲ್ಲ. ಮಂಗಳೂರಿನಲ್ಲಿ ಪರಿಸ್ಥಿರಿ ಎಷ್ಟರಮಟ್ಟಿಗೆ ಹದಗೆಟ್ಟು ಹೋಗಿದೆ ಎಂದರೆ, ಪೊಲೀಸ್ ಇಲಾಖೆ ಸಿಬ್ಬಂದಿ ಬಗ್ಗೆ ಸಾರ್ವಜನಿಕರ ಭಯವೇ ಇಲ್ಲದಂತಾಗಿದೆ. ಚಿಕ್ಕಬಳ್ಳಾಪುರದಲ್ಲಿ ರಸ್ತೆಯಲ್ಲಿ ಓಡಾಡುವವರ ಮೇಲೆಯೇ ದುಷ್ಕರ್ಮಿಯೊಬ್ಬ ಮಚ್ಚುಲಾಂಗುಗಳಿಂದ ಹಲ್ಲೆ ನಡೆಸಿದ್ದಾನೆ. ಹಾಡಹಗಲೇ ಮನೆಗಳು ದರೋಡೆ ಆಗುತ್ತಿವೆ. ಜೀವ ತೆಗೆಯಲಾಗುತ್ತಿದೆ. ಈ ಅಂಶಗಳನ್ನು ಸದನದಲ್ಲಿ ಚರ್ಚೆ ನಡೆಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಗೃಹ ಇಲಾಖೆ ಬಗ್ಗೆ ಯಾರಿಗೂ ಭಯ ಭಕ್ತಿ ಇಲ್ಲ. ಇಂದಿನ ಆಧುನಿಕ ವ್ಯವಸ್ಥೆಯಿಂದಾಗಿ ಯುವಕರು ಅಡ್ಡದಾರಿ‌ ಹಿಡಿಯುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಅವರು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಕಂಡರಿಯದ ಮಳೆಯಾಗುತ್ತಿದೆ. ಇಡಿ ರಾಜ್ಯವೇ ಮುಳುಗಿದೆ. ಕರಾವಳಿ ಪ್ರದೇಶದಲ್ಲಿ ನಗರ ಪಟ್ಟಣಗಳಲ್ಲೇ ಪ್ರವಾಹ ಸದೃಶ ಸ್ಥಿತಿ ಇದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಬೈಪಾಸ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ವಾಹನ ಸವಾರರು ಅಂಗೈನಲ್ಲಿ ಜೀವ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದಾರೆ ಎಂದ ಅವರು, ಬಯಲುಸೀಮೆ ಪ್ರದೇಶದಲ್ಲಿ ಕೆರೆಗಳೆಲ್ಲ ಕೋಡಿ ಬಿದ್ದು ಒಡೆದುಹೋಗುತ್ತಿವೆ. ಮನೆಗಳ ಕುಸಿತದಿಂದ ಜನರು ಸಾಯುತ್ತಿದ್ದಾರೆ. ಭಟ್ಕಳದಲ್ಲಿ ನಾಲ್ವರು, ಕುಕ್ಕೆ ಸುಬ್ರಮಣ್ಯದಲ್ಲಿ ಇಬ್ಬರು ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅನೇಕ ಕಡೆ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಇದು ಒಂದೆಡೆಯಾದರೆ, ಕೃಷಿ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲದಾಗಿದೆ. ರಸಗೊಬ್ಬರದ ಕೊರತೆ ಇದೆ. ಹೀಗೆ ಅನೇಕ ಸಮಸ್ಯೆಗಳಿದ್ದರೂ ಸರಕಾರ ಲಘುವಾಗಿ ಎಲ್ಲವನ್ನೂ ಪರಿಗಣಿಸಿದೆ. ಹೀಗಾಗಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು. ಎಲ್ಲದರ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದರು.

ಸರಕಾರ ಬರೀ ಹೇಳಿಕೆ, ಅಬ್ಬರದ ಪ್ರಚಾರದಲ್ಲಿಯೇ ತೊಡಗಿದೆ. 2019ರಿಂದ ಉಂಟಾದ ಮಳೆ ಅನಾಹುತಗಳ ಪರಿಹಾರ ಬಗ್ಗೆ ರಾಜ್ಯ ಸರಕಾರದ ದೊಡ್ಡ ಡೊಡ್ಡ ಘೋಷಣೆಗಳನ್ನೇ ಮಾಡಿದೆ. ಆದರೆ, ಜನರಿಗೆ ಏನೂ ಉಪಯೋಗವಾಗಿಲ್ಲ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ಎಂದರು. ಯಾರಿಗೂ ಚಿಕ್ಕಾಸು ಸಿಗಲಿಲ್ಲ. ಸರಕಾರ ಕೇವಲ ಜಾಹೀರಾತುಗಳ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದೆ ಎಂದು ಅವರು ಕಿಡಿಕಾರಿದರು.

 ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ, ಆಡಳಿತ ಪಕ್ಷಕ್ಕೆ ಮಾತ್ರವಲ್ಲ, ವಿರೋಧ ಪಕ್ಷವೂ ಜನರ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ವಿಧಾನಸಭಾಧ್ಯಕ್ಷರು ಕೂಡಲೇ ಕಲಾಪ ನಡೆಸಲು ಸರಕಾರಕ್ಕೆ ಕಿವಿ ಹಿಂಡಿ ಸೂಚನೆ ನೀಡಬೇಕು ಎಂದ ಅವರು, ಹಾಗೆ ನೋಡಿದರೆ ಸಭಾಧ್ಯಕ್ಷರ ಕ್ಷೇತ್ರದಲ್ಲೇ ದೊಡ್ಡ ಪ್ರಮಣದ ಹಾನಿಯಾಗಿದೆ ಎಂದು ಅವರು ಹೇಳಿದರು.

Join Whatsapp
Exit mobile version