ಸಿಕಂದರಾಬಾದ್: ಇಲ್ಲಿನ ಗಾಂಧಿ ಆಸ್ಪತ್ರೆಯ ವೈದ್ಯರ ಸಾಮರ್ಥ್ಯಕ್ಕೆ ಸವಾಲಾಗುವ ಕೇಸೊಂದು ಎದುರಾಗಿದ್ದು, ಅದರಲ್ಲಿ ಅವರು ಯಶಸ್ಸಾಗಿದ್ದಾರೆ. ಮಹಿಳೆಯೋರ್ವರಿಗೆ ಶಸ್ತ್ರ ಚಿಕಿತ್ಸೆ ನಡೆಸುವ ವೇಳೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ತೋರಿಸಿ ಯಶಸ್ವಿ ಆಪರೇಷನ್ ನಡೆಸಿದ್ದಾರೆ. ಇದು ವೈದ್ಯರ ಸಾಧನೆಯಾಗಿ ಪರಿಗಣಿಸಲ್ಪಟ್ಟಿದ್ದು, ಭಾರಿ ಅಭಿನಂದನೆ ವ್ಯಕ್ತವಾಗಿದೆ.
ಯಾದಾದ್ರಿ ಭುವನಗಿರಿ ಜಿಲ್ಲೆಯ ಮಹಿಳೆಯೊಬ್ಬರಿಗೆ ಮೆದುಳು ಸಂಬಂಧಿ ಕಾಯಿಲೆಯಿತ್ತು. ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷಿಸಿದ ವೈದ್ಯರಿಗೆ ಮೆದುಳಿನಲ್ಲಿ ಅಪಾಯಕಾರಿ ಗಡ್ಡೆಯೊಂದು ಬೆಳೆದಿರುವುದು ತಿಳಿದು ಬಂದಿದೆ. ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಮಾತ್ರವಲ್ಲ ಶಸ್ತ್ರಚಿಕಿತ್ಸೆ ವೇಳೆ ರೋಗಿ ಪ್ರಜ್ಞಾವಸ್ಥೆಯಲ್ಲೇ ಇರಬೇಕಾದದ್ದು ಅಗತ್ಯವಾಗಿತ್ತು. ವಿಧಿ ಇಲ್ಲದೆ ಒಪ್ಪಿದ ಮಹಿಳೆ ತಾನು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ, ತನ್ನ ಆಪರೇಷನ್ ವೇಳೆ ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ತೋರಿಸುವಂತೆ ಕೇಳಿಕೊಂಡಿದ್ದಾರೆ.
ಮಹಿಳೆಯ ಕೋರಿಕೆಯಂತೆ ಶಸ್ತ್ರಚಿಕಿತ್ಸೆ ವೇಳೆ ಚಿರಂಜೀವಿ ಅಭಿನಯದ ಅಡವಿ ದೊಂಗಾ ಚಿತ್ರವನ್ನು ತೋರಿಸಿ, ಮಹಿಳೆಯ ಮೆದುಳಿನಲ್ಲಿ ಬೆಳೆದ ಅಪಾಯಕಾರಿ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಚಿರಂಜೀವಿ ಅವರು ತಮ್ಮ ಪಿಆರ್‌ಒ ಆನಂದ್ ಅವರನ್ನು ಗಾಂಧಿ ಆಸ್ಪತ್ರೆಗೆ ಕಳುಹಿಸಿದ್ದು, ಅವರು ಆಸ್ಪತ್ರೆಯ ಅಧೀಕ್ಷಕ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯನ್ನು ಭೇಟಿ ಮಾಡಿದ್ದಾರೆ. ಅವರು ವಾಪಸ್ ಹೋಗುವಾಗ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಮಾತನಾಡಿದ ವಿಡಿಯೋ ರೆಕಾರ್ಡ್ ಮಾಡಿ ಚಿರಂಜೀವಿಗೆ ಕಳುಹಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರನ್ನು ಅಭಿನಂದಿಸಿದ ಮೆಗಾಸ್ಟಾರ್, ಇನ್ನೆರಡು ದಿನಗಳಲ್ಲಿ ಗಾಂಧಿ ಆಸ್ಪತ್ರೆಗೆ ತೆರಳಿ ಮಹಿಳೆಯನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.