Home ಟಾಪ್ ಸುದ್ದಿಗಳು ಎಲ್ಲಾ ದೇಶಗಳು ತಾಲಿಬಾನ್ ಗೆ ಮಾರ್ಗದರ್ಶನ ನೀಡಲು ಚೀನಾ ಆಗ್ರಹ

ಎಲ್ಲಾ ದೇಶಗಳು ತಾಲಿಬಾನ್ ಗೆ ಮಾರ್ಗದರ್ಶನ ನೀಡಲು ಚೀನಾ ಆಗ್ರಹ

ಬೀಜಿಂಗ್ : ಅಮೆರಿಕದ ಸೇನಾಪಡೆ ಅಫ್ಘಾನ್ ನಿಂದ ತೆರಳಿದ ನಂತರ ಆ ದೇಶದಲ್ಲಿ ಭಯೋತ್ಪಾದಕ ಗುಂಪುಗಳ ಪುನರುಜ್ಜೀವನಕ್ಕೆ ಅವಕಾಶ ಸಿಗಬಹುದು. ಈಗ ಅಫ್ಘಾನ್ ನ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳಾಗಿದ್ದು ಎಲ್ಲಾ ದೇಶಗಳೂ ತಾಲಿಬಾನ್ ನೊಂದಿಗೆ ಸಂಪರ್ಕ ಸಾಧಿಸಿ ಸಕ್ರಿಯ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಚೀನಾ ಹೇಳಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ರವಿವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಂದರ್ಭ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅಫ್ಘಾನ್ ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನ್ಹುವಾ ವರದಿ ಮಾಡಿದೆ.

ತಿಕ್ಕಾಟಕ್ಕಿಂತ ಮಾತುಕತೆ ಉತ್ತಮ ಮತ್ತು ಸಂಘರ್ಷಕ್ಕಿಂತ ಸಹಕಾರ ಉತ್ತಮ ಎಂಬ ನಿಲುವು ಚೀನಾದ್ದಾಗಿದೆ. ಅಮೆರಿಕವು ಚೀನಾದ ಬಗ್ಗೆ ತಳೆಯುವ ಧೋರಣೆಯನ್ನು ಆಧರಿಸಿ ಆ ದೇಶದೊಂದಿಗೆ ಚೀನಾದ ಸ್ನೇಹಸಂಬಂಧ ರೂಪುಗೊಳ್ಳಲಿದೆ. ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಹಳಿಗೆ ತರಲು ಅಮೆರಿಕ ಬಯಸುವುದಾದರೆ ಅವರು ಚೀನಾದ ವಿರುದ್ಧ ಕಣ್ಣುಮುಚ್ಚಿ ಮಾಡುತ್ತಿರುವ ಅಪಪ್ರಚಾರ ಮತ್ತು ದಾಳಿಯನ್ನು ಮೊದಲು ನಿಲ್ಲಿಸಬೇಕು, ಅಲ್ಲದೆ ಚೀನಾದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಯನ್ನು ಕೀಳಂದಾಜಿಸುವುದನ್ನು ನಿಲ್ಲಿಸಬೇಕು ಎಂದು ವಾಂಗ್ ಇದೇ ಸಂದರ್ಭ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Join Whatsapp
Exit mobile version