Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ: ಶಾಸಕನ ಪುತ್ರ ಸೇರಿ ಏಳು ಮಂದಿ ದುರ್ಮರಣ

ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ: ಶಾಸಕನ ಪುತ್ರ ಸೇರಿ ಏಳು ಮಂದಿ ದುರ್ಮರಣ

ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹೊಸೂರು ಶಾಸಕ ಪ್ರಕಾಶ್ ಪುತ್ರ, ಅವರ ಪತ್ನಿ ಸೇರಿ 7ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ನಿನ್ನೆ ಮಧ್ಯ ರಾತ್ರಿ 1.30ರ ವೇಳೆ ನಡೆದ ಅಪಘಾತದಲ್ಲಿ ಶಾಸಕ ಪ್ರಕಾಶ್ ಪುತ್ರ ಕರುಣಾಸಾಗರ ಹಾಗೂ ಅವರ ಪತ್ನಿ ಬಿಂದು (28), ಇಶಿತಾ (21), ಡಾ.ಧನುಶಾ (21), ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತಪಟ್ಟಿದ್ದಾರೆ.
ಕರುಣಾಸಾಗರ್ ಸ್ನೇಹಿತರ ಜೊತೆ ಕೋರಮಂಗಲದ ಝೋಲೋ ಪಿಜಿಯಲ್ಲಿ ಉಳಿದುಕೊಳ್ಳುತ್ತಿದ್ದು ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಎರಡೂ ಭಾಗದ ಎರಡು ಟೈರ್​ಗಳು ಒಡೆದು ಬ್ಯಾನೆಟ್ ಸಂಪೂರ್ಣ ಜಖಂಗೊಂಡು ಸಂಪೂರ್ಣ ನಜ್ಜುಗುಜ್ಜಾಗಿದೆ.


ಭೀಕರ ಅಪಘಾತದಲ್ಲಿ ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಸೇರಿ 6ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಅಪಘಾತಗೊಂಡ ಆಡಿ ಕ್ಯೂ ಕೆಎ 03 ಎಂವೈ 6666 ನಂಬರಿನ ಡೀಸೆಲ್ ಮಾಡೆಲ್ ಕಾರು ತಮಿಳುನಾಡಿನ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿಗೆ ಸೇರಿದ್ದು, 2015ರಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ನೋಂದಣಿಯಾಗಿದೆ. ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿ ಹೊಸೂರು ರಸ್ತೆಯಲ್ಲಿದೆ. ಹಾಲೋ ಬ್ರಿಕ್ಸ್, ಎಂ ಸ್ಯಾಂಡ್ ಮರಳು ತಯಾರಿಸುವ ಕಂಪನಿ ಇದಾಗಿದೆ. ಕಂಪನಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೂಡ ಬ್ರಾಂಚ್ ಹೊಂದಿದೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಸುದ್ದಿ ತಿಳಿದ ತಕ್ಷಣವೇ ಧಾವಿಸಿದ ಆಡುಗೋಡಿ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಅಪಘಾತಗೊಂಡ ಕಾರು ತೆರವುಗೊಳಿಸಿ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಕರುಣಾಸಾಗರ ಹಾಗೂ ಅವರ ಪತ್ನಿ ಬಿಂದು ತಮಿಳುನಾಡಿನ ಹೊಸೂರಿನವರಾದರೆ, ಅಕ್ಷಯ್ ಗೋಯಲ್ ಕೇರಳ ಮೂಲದವರು, ಉತ್ಸವ್ – ಹರ್ಯಾಣ, ರೋಹಿತ್ ಹುಬ್ಬಳ್ಳಿಯವರಾಗಿದ್ದಾರೆ.


ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಸುದ್ದಿಗಾರರ ಜೊತೆ ಮಾತನಾಡಿ, ಆಡಿ ಕಾರು ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ, ರಭಸವಾಗಿ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ, ಅದರಿಂದಾಗಿ ಏರ್ ಬ್ಯಾಗ್ ತೆರೆದುಕೊಂಡಿಲ್ಲ ದುರ್ಘಟನೆಯಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ನಮಗೆ ಸಿಕ್ಕಿರುವ ವಿಳಾಸವನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ನಿರ್ಲಕ್ಷ್ಯದ ಚಾಲನೆ ಘಟನೆಗೆ ಕಾರಣವಾಗಿದೆ. ನಿರ್ಲಕ್ಷ್ಯದ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮಾಡಲಾಗುತ್ತಿದೆ, ಮೇಲ್ನೋಟಕ್ಕೆ ಸಂಚಾರಿ ನಿಯಮ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಸಂತಾಪ

ಡಿಎಂಕೆ ಹೊಸೂರು ಶಾಸಕ ಹಾಗೂ ತಮ್ಮ ಆಪ್ತ ಸ್ನೇಹಿತ ವೈ. ಪ್ರಕಾಶ್ ಅವರ ಪುತ್ರ ಕರುಣಾಸಾಗರ್ ಸೇರಿದಂತೆ ಏಳು ಮಂದಿ ಬೆಂಗಳೂರಿನ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ಪ್ರಕಾಶ್ ಅವರ ಪುತ್ರ ತೀರಾ ಚಿಕ್ಕ ವಯಸ್ಸಿನಲ್ಲಿ ಇಂತಹ ದುರಂತಕ್ಕೆ ಬಲಿ ಆಗಿರುವುದು ಆಘಾತಕಾರಿ ಸಂಗತಿ. ಮೊದಲಿಂದಲೂ ಪ್ರಕಾಶ್ ಅವರು ತಮ್ಮೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ರಾಜಕೀಯ ಸೇರಿದಂತೆ ಅನೇಕ ವಿಚಾರಗಳನ್ನು ತಾವಿಬ್ಬರೂ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ರಾಜಕೀಯ ಮೀರಿದ ಉತ್ತಮ ಸ್ನೇಹ, ಒಡನಾಟ ತಮ್ಮ ನಡುವೆ ಇತ್ತು. ತಮ್ಮ ಮಿತ್ರನಿಗೆ ಇಂತಹ ಶೋಕ ಬರಬಾರದಿತ್ತು. ವಿಧಿ ಈ ರೀತಿ ಕ್ರೂರಿ ಆಗಬಾರದಿತ್ತು ಎಂದು ಶಿವಕುಮಾರ್ ಅವರು ನೋವು ವ್ಯಕ್ತಪಡಿಸಿದ್ದಾರೆ.

ಶಾಸಕ ಪ್ರಕಾಶ್ ಅವರು ಹಲವು ಬಾರಿ ತಮ್ಮನ್ನು ಭೇಟಿ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ನಾನು ಕೂಡ ಹೊಸೂರಿಗೆ ಹೋಗಿ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ಅಭ್ಯರ್ಥಿಯಾಗಿದ್ದ ಅವರ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದೆ. ಚುನಾವಣೆಯಲ್ಲಿ ಗೆದ್ದ ನಂತರ, ತೀರಾ ಇತ್ತೀಚೆಗೂ ಪ್ರಕಾಶ್ ಅವರು ತಮ್ಮನ್ನು ಭೇಟಿ ಮಾಡಿದ್ದರು. ಹೊಸೂರು ಕ್ಷೇತ್ರದಲ್ಲಿ ತಾವು ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಯೋಜನೆಗಳು, ತಮ್ಮ ಸರಕಾರದ ಕಾರ್ಯಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು ಎಂಬುದನ್ನು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.

ಪ್ರಕಾಶ್ ಪುತ್ರ ಕರುಣಾಸಾಗರ್ ಸೇರಿದಂತೆ ದುರ್ಮರಣಕ್ಕೆ ಒಳಗಾಗಿರುವ ಎಲ್ಲ ಏಳು ಮಂದಿಯ ಕುಟುಂಬದವರು, ಬಂಧು-ಮಿತ್ರರಿಗೆ ಈ ಶೋಕ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಡಿ.ಕೆ. ಶಿವಕುಮಾರ್ ಅವರು ಶೋಕಸಂದೇಶದಲ್ಲಿ ಹೇಳಿದ್ದಾರೆ.

ಪ್ರಕಾಶ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿವುದಾಗಿಯೂ ಶಿವಕುಮಾರ್   ತಿಳಿಸಿದ್ದಾರೆ.

Join Whatsapp
Exit mobile version