ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ಘಾಟನೆಗೆಂದು ಮಂಗಳೂರಿಗೆ ಬಂದಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೊಸ ಶಿಕ್ಷಣ ನೀತಿಯ ಸಮರ್ಥನೆ ಮಾಡಿದ್ದರು. ಮಾತ್ರವಲ್ಲ ಹೊಸ ನೀತಿಯು ಕೇಸರೀಕರಣವಾಗುತ್ತಿದೆ ಎನ್ನುವವರು ಚರ್ಚೆಗೆ ತಯಾರಾಗಲಿ ಎಂದು ಸವಾಲು ಹಾಕಿದ್ದರು. ಈ ಸವಾಲಿಗೆ ಪ್ರತಿಕ್ರಿಯಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಥಾವುಲ್ಲಾ ಅವರು, ಶಿಕ್ಷಣ ಸಚಿವರ ಜೊತೆ ಚರ್ಚೆಗೆ ನಾವು ಸಿದ್ಧರಿದೇವೆ ಎಂದು ಪ್ರತಿ ಸವಾಲು ಹಾಕಿದ್ದಾರೆ.
ಮಾಧ್ಯಮವೊಂದರ ಪ್ರತಿನಿಧಿ ಜೊತೆಗೆ ಮಾತನಾಡುತ್ತಿದ್ದಂತಹಾ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ನ ರಾಜ್ಯಾಧ್ಯಕ್ಷ ಅಥಾವುಲ್ಲಾ ಅವರು, ಇತ್ತೀಚೆಗೆ ನಮ್ಮ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಉನ್ನತ ಶಿಕ್ಷಣ ಸಚಿವರಾಗಿರುವಂತಹಾ ಡಾ. ಅಶ್ವತ್ಥ ನಾರಾಯಣ ಅವರ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಹೊಸ ಶಿಕ್ಷಣ ನೀತಿಯ ವಿರುದ್ಧ ನಮ್ಮ ಅಹವಾಲುಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲು ಅವರ ಭೇಟಿಗೆ ಪ್ರಯತ್ನಿಸಿದ್ದೆವು. ಆದರೆ ಅವರು ಭೇಟಿ ಮತ್ತು ಚರ್ಚೆಗೆ ಸಿದ್ಧರಿರಲಿಲ್ಲ ಎಂದು ಅಥಾವುಲ್ಲಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಥಾವುಲ್ಲಾ, ಹೊಸ ನೀತಿಯನ್ನು ನಮ್ಮ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ. ಸಾಂವಿಧಾನಿಕ ವೇದಿಕೆಗಳಲ್ಲಿ ಚರ್ಚೆಗೊಳಪಡಿಸದೆ ಇದನ್ನು ಜಾರಿಗೊಳಿಸುವಂತಹಾ ಅವಶ್ಯಕತೆ ಏನಿದೆ ಎಂದವರು ಪ್ರಶ್ನಿಸಿದ್ದಾರೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೊಂದಿಗೆ ಬಹಿರಂಗ ಚರ್ಚೆ ನಡೆಸಲು ನಾವು ತಯಾರಿದ್ದೇವೆ. ಶಿಕ್ಷಣ ಸಚಿವರೂ ಕೂಡಾ ತಯಾರಾಗಲಿ ಎಂದು ಸವಾಲು ಹಾಕಿದ್ದಾರೆ.