ಬೀಜಿಂಗ್: ಉತ್ತರಾಧಿಕಾರಿ ನೇಮಕದಲ್ಲಿ ತಮ್ಮ ಆಶಯದಂತೆಯೇ ದಲೈ ಲಾಮಾ ನಡೆದುಕೊಳ್ಳಲಿ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ, ‘ಟಿಬೆಟ್ ವಿಷಯದಲ್ಲಿ ಭಾರತವು ಎಚ್ಚರ ವಹಿಸುವುದು ಸೂಕ್ತ’ ಎಂದಿದ್ದಾರೆ.
‘14ನೇ ದಲೈ ಲಾಮಾ ಅವರ ಚೀನಾ ವಿರೋಧಿ ನೀತಿಯ ಪ್ರತ್ಯೇಕತಾವಾದಿ ಮನಸ್ಥಿತಿಗೆ ಸಂಬಂಧಿಸಿದಂತೆ ಭಾರತವು ತನ್ನ ನಿಲುವನನ್ನು ಸ್ಪಷ್ಟಪಡಿಸಬೇಕು. ಜತೆಗೆ ಷಿಜಾಂಗ್ (ಟಿಬೆಟ್) ವಿಷಯದಲ್ಲೂ ಚೀನಾದ ಹೇಳಿಕೆಗಳನ್ನು ಭಾರತ ಗೌರವಿಸಬೇಕು’ ಎಂದು ರಿಜಿಜು ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.
‘ಚೀನಾದ ಆಂತರಿಕ ವಿಷಯದಲ್ಲಿ ಭಾರತ ಮಧ್ಯಪ್ರವೇಶಿಸಬಾರದು ಮತ್ತು ಇಂಥ ವಿಷಯಗಳಲ್ಲಿ ಎಚ್ಚರವಹಿಸಬೇಕು. ಷಿಜಾಂಗ್ (ಟಿಬೆಟ್) ವಿಷಯವು ಭಾರತ ಮತ್ತು ಚೀನಾ ನಡುವಿನ ಅಭಿವೃದ್ಧಿಗೆ ತೊಡಕಾಗದಂತೆ ಎಚ್ಚರವಹಿಸಬೇಕು’ ಎಂದಿದ್ದಾರೆ.
ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ರಿಜಿಜು ಅವರು ಅಧಿಕೃತ ಹೇಳಿಕೆ ನೀಡಿದವರಲ್ಲಿ ಮೊದಲಿಗರು.
ಟಿಬೆಟ್ನ ಧಾರ್ಮಿಕ ಗುರು ದಲೈ ಲಾಮ ಅವರು ತಾವೇ 2015ರಲ್ಲಿ ಸ್ಥಾಪಿಸಿದ ಗಾಡೆನ್ ಫೊಡ್ರಾಂಗ್ ಟ್ರಸ್ಟ್ನ ಮೂಲಕವೇ ಉತ್ತರಾಧಿಕಾರಿ ನೇಮಕವಾಗಲಿದೆ. ತನ್ನ ಪುನರ್ಜನ್ಮದ ಮೂಲಕವೇ ಭವಿಷ್ಯದ ದಲೈ ಲಾಮಾ ಅಧಿಕಾರಕ್ಕೆ ಬರಲಿದ್ದು, ಅವರನ್ನು ಗುರುತಿಸುವ ಅಧಿಕಾರ ತನಗಿದೆ ಎಂದು 14ನೇ ದಲೈ ಲಾಮಾ ಹೇಳಿದ್ದರು.
