Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಕಳಪೆ ಕಾಮಗಾರಿ ಹಿನ್ನೆಲೆ ; ಮಳೆ ನೀರಿಗೆ ಕೊಚ್ಚಿಹೋದ ರಸ್ತೆ

ಚಿಕ್ಕಮಗಳೂರು: ಕಳಪೆ ಕಾಮಗಾರಿ ಹಿನ್ನೆಲೆ ; ಮಳೆ ನೀರಿಗೆ ಕೊಚ್ಚಿಹೋದ ರಸ್ತೆ

ಕಳಸ: ಕಳೆದ ಬೇಸಿಗೆಯಲ್ಲಿ ನಿರ್ಮಿಸಲಾದ ಹೊರನಾಡು-ಬಲಿಗೆ ರಸ್ತೆಯ ಕೆಲವೆಡೆ ಚರಂಡಿ ನಿರ್ಮಾಣ ಮಾಡದ ಕಾರಣ ಮಳೆ ನೀರಿನಿಂದಾಗಿ ರಸ್ತೆ ಹಾನಿಗೊಳಗಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

₹6.5 ಕೋಟಿ ವೆಚ್ಚದ ಈ ರಸ್ತೆಯ ಕಾಮಗಾರಿಯ ಸಂದರ್ಭದಲ್ಲಿ ಗುತ್ತಿಗೆದಾರ ಚರಂಡಿ ಕೆಲಸ ಮಾಡಿರಲಿಲ್ಲ. ಇದೀಗ ಮಳೆ ಆರಂಭವಾಗಿದ್ದು ದೊಡ್ಡ ಪ್ರಮಾಣದಲ್ಲಿ ನೀರು ರಸ್ತೆ ಪಕ್ಕ ಹರಿಯುತ್ತಿದ್ದು,ಡಾಂಬರು ರಸ್ತೆಯ ಹಲವು ಭಾಗಗಳು ಈಗಾಗಲೇ ಮಳೆ ನೀರಿಗೆ ಕೊಚ್ಚಿ ಹೋಗಿವೆ.

‘ಮಳೆಗಾಲಕ್ಕೂ ಮುನ್ನ ಚರಂಡಿ ನಿರ್ಮಾಣ ಮಾಡುವ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ಮನವಿ ಮಾಡಿದರೂ ಯಾವುದೇ ಉಪಯೋಗ ಆಗಿಲ್ಲ. ಕೋಟ್ಯಂತರ ರೂಪಾಯಿ ಸರ್ಕಾರಿ ಹಣವನ್ನು ಹೀಗೆ ಹಾಳು ಮಾಡಲಾಗುತ್ತಿದೆ. ಇನ್ನು ನಮ್ಮ ಊರಿನ ರಸ್ತೆಗೆ ಸದ್ಯಕ್ಕೆ ಹಣ ಸಿಗುವ ಸಾಧ್ಯತೆ ಇಲ್ಲ’ ಎಂದು ರೈತ ಸಂಘದ ಮುಖಂಡ ಬಲಿಗೆ ನಿವಾಸಿ ಸವಿಂಜಯ ಹೇಳಿದರು.

‘ಅಂದಿನ  ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರ ಮನವೊಲಿಸಿ ನಾವು ಈ ರಸ್ತೆಗೆ ದುಡ್ಡು ಬಿಡುಗಡೆ ಮಾಡಿಸಿದ್ದೆವು. ಆದರೆ, ಸರಿಯಾಗಿ ಕಾಮಗಾರಿ ಮಾಡಲಿಲ್ಲ. ಈ ವರ್ಷದ ಬೇಸಿಗೆಯಲ್ಲಿ ಮಾಡಿದ ಕಾಮಗಾರಿಯಲ್ಲಿ ರಸ್ತೆಯ ಅಗಲವನ್ನು ಕೂಡ ಕಡಿಮೆ ಮಾಡಿದ್ದಾರೆ. ಚರಂಡಿ ನಿರ್ಮಿಸದೆ ರಸ್ತೆ ಹಾಳಾಗುತ್ತಿದೆ.  ಇದಕ್ಕೆಲ್ಲಾ ಸಂಬಂಧಪಟ್ಟಅಧಿಕಾರಿಗಳು ಕಾರಣವಾಗಿದ್ದು,  ಇವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಪ್ರಸಾದ್ ಜೈನ್ ಬಲಿಗೆ ಹೇಳಿದರು.

Join Whatsapp
Exit mobile version