Home ಟಾಪ್ ಸುದ್ದಿಗಳು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡ ರಾಜೀನಾಮೆ

ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡ ರಾಜೀನಾಮೆ

ಹೊಸದಿಲ್ಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪಿತ್ರೋಡಾ ರಾಜೀನಾಮೆ ಪತ್ರ ಸಲ್ಲಿಸಿದ್ದು, ಖರ್ಗೆ ಅದನ್ನು ಸ್ವೀಕರಿಸಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.

ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ, ಭಾರತದ ವಿವಿಧ ಭಾಗಗಳ ಭಾರತೀಯರು ಹೇಗೆ ಕಾಣುತ್ತಾರೆ ಎಂದು ವ್ಯಾಖ್ಯಾನಿಸಿದ್ದು ವಿವಾದಾಸ್ಪದವಾಗಿದೆ. ಪಿತ್ರೋಡಾ ಹೇಳಿಕೆಯನ್ನು ಕಾಂಗ್ರೆಸ್ ಕೂಡ ಖಂಡಿಸಿತ್ತು. ಇದು ಸ್ವೀಕಾರ್ಹವಲ್ಲ ಎಂದಿದೆ. ಇದರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಭಾರತದ ವೈವಿಧ್ಯತೆಯ ಬಗ್ಗೆ ಮಾತನಾಡುವಾಗ, ದೇಶದ ಪೂರ್ವದಲ್ಲಿ ಜನ ಚೀನೀಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ, ಪಶ್ಚಿಮದವರು ಅರಬ್ಬರಂತೆ, ಉತ್ತರದವರು ಬಿಳಿಯರಂತೆ ಕಂಡುಬರುತ್ತಾರೆ. ಆದಾಗ್ಯೂ, ನಾವೆಲ್ಲರೂ ಸೋದರ ಸೋದರಿಯರು. ಹೀಗಾಗಿ ಆ ವೈವಿಧ್ಯತೆ ಅಪ್ರಸ್ತುತ ಮತ್ತು ವೈವಿಧ್ಯ ಹೊಂದಿದ್ದರೂ ಒಂದು ದೇಶವನ್ನಾಗಿ ಭಾರತವನ್ನು ಒಂದು ಚೌಕಟ್ಟಿನಲ್ಲಿ ತಂದಿಡಬಹುದು ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕ ಜನಾಂಗೀಯವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ಮೇಲೆ ಹರಿಹಾಯ್ದಿತ್ತು. ಪಿತ್ರೋಡಾ ಹೇಳಿಕೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದರು. ಕಾಂಗ್ರೆಸಿನ ಅಸಲಿ ಮುಖದ ಅನಾವರಣ ಇದು ಎಂದಿದ್ದರು.

ಕಳೆದ ತಿಂಗಳು ಪಿತ್ರೋಡಾ ನೀಡಿದ ಹೇಳಿಕೆ ಕೂಡ ವಿವಾದವಾಗಿತ್ತು. ಅಮೆರಿಕದ ಕಾನೂನು ಭಾರತದಲ್ಲಿ ಜಾರಿಗೆ ತರಲು ಕಾಂಗ್ರೆಸ್ ಮುಂದಾಗಿದೆ ಎಂಬ ಟೀಕೆಗೆ ಕಾರಣವಾಗಿತ್ತು.

Join Whatsapp
Exit mobile version