Home Uncategorized ಐಪಿಎಲ್ ಬೆಟ್ಟಿಂಗ್ ; ಪಾಕಿಸ್ತಾನದಿಂದಲೇ ಫಲಿತಾಂಶದ ಸುಳಿವು ?

ಐಪಿಎಲ್ ಬೆಟ್ಟಿಂಗ್ ; ಪಾಕಿಸ್ತಾನದಿಂದಲೇ ಫಲಿತಾಂಶದ ಸುಳಿವು ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸುತ್ತ ಮತ್ತೊಮ್ಮೆ ಬೆಟ್ಟಿಂಗ್‌ ಕರಿನೆರಳು ಆವರಿಸಿದೆ. ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಅಂತರಾಷ್ಟ್ರೀಯ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬೇಧಿಸಿದ್ದು, ಈ ಸಂಬಂಧ ಎರಡು ಎಫ್‌ಐಆರ್‌ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಐಪಿಎಲ್‌ ಪಂದ್ಯಗಳ ಫಲಿತಾಂಶದ ಕುರಿತು ಪಾಕಿಸ್ತಾನದ ವ್ಯಕ್ತಿ ನೀಡುತ್ತಿದ್ದ ʻಮಾಹಿತಿಗಳನ್ನುʼ ಆಧರಿಸಿ ನಡೆಯುತ್ತಿದ್ದ ಬೆಟ್ಟಿಂಗ್‌ ಜಾಲದಲ್ಲಿ ಸರ್ಕಾರಿ ಮತ್ತು ಬ್ಯಾಂಕ್‌ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಸಿಬಿಐ ಮೂಗಳು ತಿಳಿಸಿದೆ. ಈ ಕುರಿತು ದೆಹಲಿ, ಜೋಧಪುರ, ಹೈದರಾಬಾದ್‌ ಮತ್ತು ಜೈಪುರದಲ್ಲಿ ವಿಚಾರಣೆಯನ್ನು ತೀವ್ರಗೊಳಿಸಿದೆ.


2013ರಿಂದಲೂ ಸಕ್ರೀಯವಾಗಿರುವ ಐಪಿಎಲ್‌ ಬೆಟ್ಟಿಂಗ್‌ ಜಾಲಕ್ಕೆ ಸಂಬಂಧಪಟ್ಟಂತೆ ಬುಕ್ಕಿಗಳಾದ ದೆಹಲಿಯ ರೋಹಿಣಿ ಪ್ರದೇಶದ ದಿಲೀಪ್ ಕುಮಾರ್, ಹೈದರಾಬಾದ್‌ ನ ಗುರ್‌ ರಾಂ ಸತೀಶ್ ಮತ್ತು ಗುರ್‌ ರಾಂ ವಾಸು ಸೇರಿದಂತೆ ಮೂವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಶುಕ್ರವಾರ ದಾಖಲಾಗಿರುವ ಎರಡನೇ ಎಫ್‌ಐಆರ್‌ನಲ್ಲಿ, ಸಜ್ಜನ್ ಸಿಂಗ್, ಪ್ರಭು ಲಾಲ್ ಮೀನಾ, ರಾಮ್ ಅವತಾರ್ ಮತ್ತು ಅಮಿತ್ ಕುಮಾರ್ ಶರ್ಮಾ ಹೆಸರಿದೆ.


11 ಕೋಟಿ ರುಪಾಯಿಗೂ ಅಧಿಕ ಮೊತ್ತದ ಹಣಕಾಸಿನ ವ್ಯವಹಾರಗಳನ್ನು ಈ ಜಾಲ ನಡೆಸಿದೆ. ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಲು ಪ್ರೇರೇಪಿಸಲು ಆರೋಪಿಗಳು ಬ್ಯಾಂಕ್‌ ಮೂಲವೇ ವ್ಯವಹಾರ ನಡೆಸುತ್ತಿದ್ದರು. ನಕಲಿ ಬ್ಯಾಂಕ್‌ ಖಾತೆ ತೆರೆಯುವುದು ಸೇರಿದಂತೆ ಈ ವ್ಯವಹಾರದಲ್ಲಿ ಕೆಲ ಸರ್ಕಾರಿ ಮತ್ತು ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ.

ಬೆಟ್ಟಿಂಗ್‌ನಿಂದ ಸಂಗ್ರಹಿಸಲಾದ ಹಣವನ್ನು ಹವಾಲಾ ಜಾಲದಲ್ಲಿ ಬಳಸಲಾಗುತ್ತಿತ್ತು ಎಂಬ ಅಂಶವು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಾಕಿಸ್ತಾನಿ ಪ್ರಜೆ ವಾಖರ್‌ ಮಲಿಕ್‌ ಎಂಬಾತ ನೀಡುತ್ತಿದ್ದ ಪಂದ್ಯದ ಫಲಿತಾಂಶದ ಕುರಿತಾದ ಸುಳಿವುಗಳನ್ನು ಆಧರಿಸಿ ಭಾರತದಾದ್ಯಂತ ಬೆಟ್ಟಿಂಗ್‌ ಜಾಲ ಸಕ್ರೀಯವಾಗಿತ್ತು. ಈತನ ದೂರವಾಣಿ ಸಂಖ್ಯೆಯನ್ನು ಕಲೆಹಾಕುವಲ್ಲಿ ಸಿಬಿಐ ಯಶಸ್ವಿಯಾಗಿದೆ.

Join Whatsapp
Exit mobile version