Home ಕರಾವಳಿ ಮಂಗಳೂರಲ್ಲಿ ನಮಾಝ್ ವಿರುದ್ಧ ಕೇಸ್: ರೊಚ್ಚಿಗೆದ್ದ ಕಾಂಗ್ರೆಸ್ ಪಕ್ಷದ ಮುಸ್ಲಿಮರು

ಮಂಗಳೂರಲ್ಲಿ ನಮಾಝ್ ವಿರುದ್ಧ ಕೇಸ್: ರೊಚ್ಚಿಗೆದ್ದ ಕಾಂಗ್ರೆಸ್ ಪಕ್ಷದ ಮುಸ್ಲಿಮರು

ಮಂಗಳೂರು ಪೊಲೀಸರ ಕ್ರಮಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ

ದ.ಕ ಉಸ್ತುವಾರಿ ಸಚಿವರು ಸೇರಿದಂತೆ ಹಿರಿಯ ನಾಯಕರಿಗೆ ತರಾಟೆ

ಮಂಗಳೂರು: ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ್ದಕ್ಕೆ ನಗರದ ಪೊಲೀಸರು ಸುಮೋಟೋ ದಾಖಲಿಸಿರುವ ಕ್ರಮಕ್ಕೆ ಮುಸ್ಲಿಂ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರು ಕಾಂಗ್ರೆಸ್ ಸರಕಾರ ಮತ್ತು ಮಂಗಳೂರು ಪೊಲೀಸರ ವಿರುದ್ಧ ಹರಿಹಾಯುತ್ತಿದ್ದಾರೆ. ರಸ್ತೆಯಲ್ಲಿ ನಮಾಝ್ ಮಾಡಿದ್ದಕ್ಕೆ ಕೇಸ್ ದಾಖಲಿಸುವುದಾದರೆ, ಇತರ ಧರ್ಮೀಯರು ರಸ್ತೆಯಲ್ಲಿ ನಡೆಸುವ ಧಾರ್ಮಿಕ ಆಚರಣೆಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರು ನಗರ ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ಕಾರ್ಯಕರ್ತರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಬೆಂಬಲಿಸಿ ಅಧಿಕಾರಕ್ಕೆ ತಂದ ಪಕ್ಷ ಅಧಿಕಾರದಲ್ಲಿದ್ದರೂ ಮುಸ್ಲಿಮರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮಾಡುತ್ತಿದ್ದರೂ ಬಿಜೆಪಿ ಆಡಳಿತದ ಕಾಲದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಾರತಮ್ಯಗಳು ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಮುಸ್ಲಿಮರು, ಈ ಪುರುಷಾರ್ಥಕ್ಕೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ರಸ್ತೆ ನಮಾಝ್ ಸಂಬಂಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿರುವುದು ಮಂಗಳೂರಿನ ಮುಸ್ಲಿಂ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ದ.ಕ. ಜಿಲ್ಲೆಯ ಮುಸ್ಲಿಂ ನಾಯಕರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಪ್ರಮುಖ ನಾಯಕರಿಗೆ ದೂರವಾಣಿ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ನಾಳೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಕಳೆದ ಶುಕ್ರವಾರದ ನಮಾಝ್ ವೇಳೆ ಮಸೀದಿಯಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದ್ದರಿಂದ ಬೆರಳೆಣಿಕೆಯ ಮುಸ್ಲಿಮರು ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ್ದರು. ಅದರ ವೀಡಿಯೊ ವೈರಲ್ ಮಾಡಲಾಗಿತ್ತು. ಆ ವೀಡಿಯೊ ಆಧಾರದಲ್ಲಿ ಪೊಲೀಸರು ಸಾರ್ವಜನಿಕರಿಗೆ ಅಡಚಣೆಯಾಗಿದೆ ಎಂದು ಆರೋಪಿಸಿ ಇಂದು ಸುಮೋಟೋ ಕೇಸ್ ದಾಖಲಿಸಿದ್ದಾರೆ.

ಶುಕ್ರವಾರದ ನಮಾಝ್ ವೇಳೆ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಿದ್ದರೂ ಪೊಲೀಸರು ಸಾರ್ವಜನಿಕರಿಗೆ ಅಡಚಣೆಯಾಗಿದೆ ಎಂದು ಕೇಸ್ ದಾಖಲಿಸಿದ್ದಾರೆ. ಇದು ಮಂಗಳೂರಿನ ಮುಸ್ಲಿಮರಲ್ಲಿ‌ ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp
Exit mobile version