Home ಟಾಪ್ ಸುದ್ದಿಗಳು ರಸ್ತೆಯಲ್ಲಿ ನಮಾಝ್: ಇದು ಪರಿಹಾರವಿಲ್ಲದ ಸಮಸ್ಯೆಯೇ?

ರಸ್ತೆಯಲ್ಲಿ ನಮಾಝ್: ಇದು ಪರಿಹಾರವಿಲ್ಲದ ಸಮಸ್ಯೆಯೇ?

ಇಸ್ಮತ್ ಪಜೀರ್

ಮಂಗಳೂರಿನ ಕಂಕನಾಡಿ ಮಸೀದಿಯ ಗೇಟಿನ ಪಕ್ಕ ರಸ್ತೆಯಲ್ಲಿ ಮಸೀದಿಯಲ್ಲಿ ಜಾಗವಿಲ್ಲದ ಕಾರಣ ಹತ್ತು ಹನ್ನೆರಡು ಮಂದಿ ಮೊನ್ನೆ ಶುಕ್ರವಾರ ನಮಾಝ್ ಮಾಡಿದ್ದಾರೆ. ಓರ್ವ ಧರ್ಮನಿಷ್ಟ ಮುಸ್ಲಿಮನಾಗಿಯೂ ನಾನಿದನ್ನು ಸಮರ್ಥಿಸುವುದಿಲ್ಲ. ಅದಾಗ್ಯೂ ಅದರ ಸುತ್ತ ಹುಟ್ಟಿಕೊಂಡ ವಿವಾದದ ಸುತ್ತ ಚರ್ಚೆ ನಡೆಸಲೇಬೇಕು. ರಸ್ತೆಯಲ್ಲಿ ನಮಾಝ್ ಮಾಡಿದ್ದು ಹೌದು. ಆದರೆ ನ್ಯೂಸ್ ಚಾನೆಲ್‌ಗಳು ವರದಿ ಮಾಡಿದಂತೆ ಅದರಿಂದಾಗಿ ರಸ್ತೆ ತಡೆಯುಂಟಾಗುವಷ್ಟು ದೊಡ್ಡ ಸಮಸ್ಯೆಯೇನೂ ಮೊನ್ನೆ ಆಗಿಲ್ಲ. ಅಲ್ಲಿ ಯಾವ ವಾಹನ ಸವಾರರೂ ಆ ಹೊತ್ತಿಗೆ ಯೂ ಟರ್ನ್ ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ನಮಾಝ್ ಮಾಡುವಾಗ ಸುಮಾರು ಹನ್ನೆರಡು ಅಡಿ ಅಗಲದ ರಸ್ತೆಯಲ್ಲಿ ಹೆಚ್ಚೆಂದರೆ, ಮೂರು ಅಡಿ ಜಾಗವಷ್ಟೇ ಆರೇಳು ನಿಮಿಷಗಳ ಕಾಲ ಕವರ್ ಆಗಿತ್ತು. ಆ ಒಳರಸ್ತೆಯುದ್ದಕ್ಕೂ ಆಕ್ರಮಿಸುವಷ್ಟು ಜನರು ರಸ್ತೆಯಲ್ಲಿ ನಮಾಝ್ ಮಾಡಿಲ್ಲ. ಹತ್ತು- ಹನ್ನೆರಡು ಮಂದಿಯಷ್ಟೇ ಆರೇಳು ನಿಮಿಷಗಳ ಕಾಲ ನಮಾಝ್ ಮಾಡಿದ್ದಾರೆ. ಅದಾಗ್ಯೂ ಅದನ್ನು ಸಮರ್ಥಿಸುವುದಿಲ್ಲ. ಇದನ್ನೇ ಹಿಡ್ಕೊಂಡು ಈಗ ಭಜರಂಗದಳ ದೊಡ್ಡದೊಂದು ಇಶ್ಯೂ ಮಾಡ ಹೊರಟಿದೆ. ಇನ್ನು ಮುಂದಕ್ಕೆ ಇಂತಹದ್ದು ಕಂಡರೆ ನೇರ ಕಾರ್ಯಾಚರಣೆಗಿಳಿಯುವುದಾಗಿ ಎಚ್ಚರಿಕೆ ನೀಡಿದೆ. ಅವರದ್ದೇ ಧಾಟಿಯಲ್ಲಿ ಮಾತನಾಡುವುದಾದರೆ, ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿಯ ರಸ್ತೆಯನ್ನು ಖಾಯಂ ಆಗಿ ಆಕ್ರಮಿಸಿ ಅಲ್ಲಿ ದೇವಸ್ಥಾನಕ್ಕೆ ಬಂದವರ ವಾಹನಗಳ ಅನಧಿಕೃತ ಪಾರ್ಕಿಂಗ್, ಪ್ರಸಾದ ಹಂಚುವುದು, ಜನ ರಸ್ತೆಯಲ್ಲೇ ಲೈನ್‌ನಲ್ಲಿ ನಿಂತು ದರ್ಶನಕ್ಕೆ ಕಾಯುವುದು ಇತ್ಯಾದಿಗಳು ನಡೆಯುತ್ತವೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ..? ರಸ್ತೆಯೆಂದ ಮೇಲೆ ದೇವಸ್ಥಾನದ ಪಕ್ಕ ಹಾದು ಹೋಗುವ ರಸ್ತೆ ಮತ್ತು ಮಸೀದಿ ಪಕ್ಕ ಹಾದು ಹೋಗುವ ರಸ್ತೆ ಎಂಬ ವ್ಯತ್ಯಾಸವಿದೆಯೇ? ನನ್ನ ಪ್ರಕಾರ ಇವೆರಡೂ ಸಮರ್ಥನೀಯವಲ್ಲ.

ಮಸೀದಿಯ ಹೊರಗಡೆ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಜನರಿಗೆ ತೊಂದರೆಯಾಗುತ್ತದೆಂಬ ಕಾಳಜಿ ಅದನ್ನು ರೆಕಾರ್ಡ್ ಮಾಡಿದವರಿಗೆ ಇದ್ದರೆ ನೇರವಾಗಿ ಸ್ಥಳೀಯ ಪೋಲಿಸ್ ಠಾಣೆಗೆ ಹೋಗಿ ದಾಖಲೆಗಳನ್ನಿಟ್ಟುಕೊಂಡು ದೂರು ದಾಖಲಿಸಬೇಕೇ ಹೊರತು ಈ ರೀತಿ ಕದ್ದು ಮುಚ್ಚಿ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿ ಸಾರ್ವಜನಿಕ ಶಾಂತಿ ಕದಡುವ ಕೆಲಸ ಮಾಡುವುದಲ್ಲ. ಪೋಲೀಸರು ಬಂದು ದೂರು ದಾಖಲಿಸುತ್ತಾರೆ. ಆ ಬಳಿಕ ದೂರು ನೀಡಿದವರು ನ್ಯಾಯಾಲಯಕ್ಕೆ ಹೋಗಬೇಕು. ಇದಕ್ಕೆಲ್ಲಾ ಖರ್ಚಾಗುತ್ತದೆ, ನಾವು ಅದರ ಹಿಂದೆ ಅಲೆಯಬೇಕು ಎಂದು ಈ ರೀತಿ ವೈರಲ್ ಮಾಡಿ ಜನರ ನೆಮ್ಮದಿ ಕೆಡಿಸುವ ಕೆಲಸ ಮಾಡಿದ್ದಾರೆ. ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಭಂಗವಾಗಿದೆ ಎಂದಾದರೆ, ರೆಕಾರ್ಡ್ ಮಾಡಿ ವೈರಲ್ ಮಾಡುವವರ ವಿಘ್ನ ಸಂತೋಷಿ ಕೃತ್ಯಗಳಿಂದ ಸಾರ್ವಜನಿಕ ಶಾಂತಿಗೂ ಭಂಗವುಂಟಾಗುತ್ತದಲ್ಲವೇ?
ಅದರ ವಿರುದ್ಧವೂ ಕೇಸು ದಾಖಲಿಸಬೇಕಿದೆ.


ಇನ್ನು ಈ ಪ್ರಕರಣವನ್ನು ಇಸ್ಲಾಮೀ ವಿಧಾನದಲ್ಲಿಯೂ ವಿಮರ್ಶೆ ಮಾಡಬಹುದು. ಬನ್ನಿ ಅದನ್ನೂ ಮಾಡಿಯೇ ಬಿಡೋಣ. ಮೊದಲನೆಯದಾಗಿ, ರಸ್ತೆ ತಡೆ ಉಂಟು ಮಾಡುವುದನ್ನು ಇಸ್ಲಾಮ್ ಬಲವಾಗಿ ಖಂಡಿಸುತ್ತದೆ. ಇಸ್ಲಾಮಿನ ನಿಯಮಾವಳಿಗಳು ಎಷ್ಟು ಸೂಕ್ಷ್ಮವಾಗಿದೆಯೆಂದರೆ “ಮಸೀದಿಯಲ್ಲಿ ಯಾರಾದರೂ ಮಲಗಿ ನಿದ್ರಿಸುತ್ತಾರಾದರೆ ಆ ಹೊತ್ತಿಗೆ ನಮಾಝಿಗೆ ಬಂದವ ಆತನ ನಿದ್ರೆಗೆ ಭಂಗವಾಗುವಂತೆ ಉಚ್ಚ ಸ್ವರದಲ್ಲಿ ನಮಾಝ್‌ ಮಾಡುವಂತೆಯೋ, ಖುರ್‌ಆನ್ ಪ್ರವಚನ ಮಾಡುವಂತೆಯೋ ಇಲ್ಲ. ಅಷ್ಟರವರೆಗೆ ಇಸ್ಲಾಮ್ ಮನುಷ್ಯನ ನೆಮ್ಮದಿಗೆ ಭಂಗ ತರಬಾರದೆಂದು ಆದೇಶಿಸುತ್ತದೆ. ಇನ್ನು ಶುಕ್ರವಾರದ ಜುಮಾ ನಮಾಝ್ ಎಂದರೆ ಬರೀ ಸಾಮೂಹಿಕ ನಮಾಝಿನ ಹೊತ್ತಿಗೆ ಮಸೀದಿ ತಲುಪಿದರೆ ಸಾಕಾಗುವುದಿಲ್ಲ.ಎಲ್ಲಾ ಮಸೀದಿಗಳಲ್ಲೂ ಜುಮಾ ನಮಾಝುಗಿಂತ ಮುಂಚೆ ಖುತ್ಬಾ ಎಂಬ ಪ್ರವಚನವೊಂದಿರುತ್ತದೆ. ಅದು ಅತೀ ಕನಿಷ್ಠವೆಂದರೂ ಹದಿನೈದು ನಿಮಿಷಗಳ ಕಾಲ ಇರುತ್ತದೆ.ಅದು ಜುಮಾದ ಅವಿಭಾಜ್ಯ ಅಂಗ. ಹೀಗೆ ರಸ್ತೆಯಲ್ಲಿ ನಮಾಝ್ ಮಾಡುವವರು ಖುತ್ಬಾದ ಹೊತ್ತಿಗೆ ತಲುಪದೇ ಕೊನೇ ಗಳಿಗೆಯಲ್ಲಿ ಮಸೀದಿಗೆ ತಲುಪುವವರು ಮಾತ್ರ. ಒಂದು ವೇಳೆ ಖುತ್ಬಾದ ಸಮಯಕ್ಕೆ ಮಸೀದಿಗೆ ತಲುಪಿದರೆ ಮಸೀದಿಯೊಳಗೆ ನಮಾಝ್ ಮಾಡಲು ಸ್ಥಳಾವಕಾಶ ಸಿಗುತ್ತದೆ. ಈ ಲೇಟ್ ಲತೀಪುಗಳು ತಲುಪುವ ಹೊತ್ತಿಗೆ ಕೆಲವು ಮಸೀದಿಗಳು ಭರ್ತಿಯಾಗಿರುತ್ತವೆ.
ಮಂಗಳೂರು ಮುಸ್ಲಿಂ ಬಾಹುಳ್ಯವಿರುವ ನಗರ. ನಗರದೊಳಗೆ ಪ್ರತೀ ಒಂದು ಕಿಲೋ ಮೀಟರ್ ಅಂತರದಲ್ಲಿ ಮಸೀದಿಗಳೂ ಇವೆ. ಒಂದು ಮಸೀದಿಯಲ್ಲಿ ಜಾಗವಿರದಿದ್ದರೆ ಇನ್ನೊಂದು ಮಸೀದಿಗೆ ಹೋಗಬಹುದು. ಅದಾಗ್ಯೂ ಇಲ್ಲೊಂದು ತಾಂತ್ರಿಕ ಸಮಸ್ಯೆಯಿದೆ. ಅದೇನಪ್ಪಾ ಎಂದರೆ, ನಗರದ ಒಂದೆರಡು ಮಸೀದಿಗಳು ಬಿಟ್ಟರೆ ಹೆಚ್ಚೆನೆಲ್ಲಾ ಮಸೀದಿಗಳಲ್ಲಿ ಒಂದೇ ಸಮಯಕ್ಕೆ ಜುಮಾ ನಮಾಝ್ ಮಾಡಲಾಗುತ್ತದೆ. ಜುಮಾ ನಮಾಝಿನ ಸಮಯವನ್ನು ಸ್ವಲ್ಪ ಆಚೀಚೆ ಮಾಡಲು ಇಸ್ಲಾಮಿನಲ್ಲಿ ಧಾರಾಳ ಅವಕಾಶಗಳಿವೆ. ಹಾಗಿರುವಾಗ ನಗರದ ಹೃದಯ ಭಾಗಗಗಳಲ್ಲಿರುವ ಪಂಪ್‌ವೆಲ್, ಕಂಕನಾಡಿ, ಬಾವುಟಗುಡ್ಡೆ ಈದ್ಗಾ, ನೂರ್ ಮಸ್ಜಿದ್, ಪೋಲೀಸ್ ಲೇನ್ ಮಸೀದಿ, ಝೀನತ್ ಬಕ್ಷ್ ಮಸೀದಿ, ಕಛ್ ಮೆಮನ್ ಮಸೀದಿ, ಕಂದಕ್ ಮಸೀದಿ ಮುಂತಾದೆಡೆಗಳಲ್ಲಿನ ನಮಾಝ್‌ಗಳಲ್ಲಿ ತಲಾ ಹದಿನೈದು ನಿಮಿಷಗಳ ಅಂತರವಿಟ್ಟು ಮಧ್ಯಾಹ್ನ ಒಂದು ಗಂಟೆಯಿಂದ,ಎರಡು ಗಂಟೆಯವರೆಗೆ ವಿವಿದೆಡೆ ನಮಾಝ್ ವ್ಯವಸ್ಥೆ ಮಾಡಿದರೆ ಇಂತಹ ಸ್ಥಳಾವಕಾಶದ ಕೊರತೆ, ರಸ್ತೆಯಲ್ಲಿ ನಮಾಝ್ ಮಾಡುವ ಸನ್ನಿವೇಶ ಉಂಟಾಗದು. ಇನ್ನು ಪಂಪ್‌ವೆಲ್ ಮಸೀದಿಯಂತಹ ಬೃಹತ್ ಮಸೀದಿಯಲ್ಲಿ ಯಾವ ಕಾರಣಕ್ಕೂ ಸ್ಥಳಾವಕಾಶದ ಕೊರತೆಯುಂಟಾಗದು. ಮುಸ್ಲಿಂ ಉಲಮಾ ಮತ್ತು ಉಮರಾ ವರ್ಗ ಈ ನಿಟ್ಟಿನಲ್ಲಿಯೂ ಚರ್ಚಿಸಿ ಕಾರ್ಯಪ್ರವೃತ್ತಗೊಂಡರೆ ಇಂತಹ ಅನಗತ್ಯ ವಿವಾದಗಳು ಸಮುದಾಯದ ಸುತ್ತ ಸುತ್ತಿಕೊಳ್ಳದಂತೆ ಮಾಡುವುದು ಸಾಧ್ಯವಿದೆ.

-ಇಸ್ಮತ್ ಪಜೀರ್

Join Whatsapp
Exit mobile version