Home ಟಾಪ್ ಸುದ್ದಿಗಳು ಸ್ವಾಭಿಮಾನ ಬಿಟ್ಟು ಕೆಲಸ ಮಾಡಲಾಗದು : ಕೋರ್ಟ್ ರೂಂನಲ್ಲಿ ರಾಜೀನಾಮೆ ನೀಡಿದ ಹೈಕೋರ್ಟ್ ಜಡ್ಜ್

ಸ್ವಾಭಿಮಾನ ಬಿಟ್ಟು ಕೆಲಸ ಮಾಡಲಾಗದು : ಕೋರ್ಟ್ ರೂಂನಲ್ಲಿ ರಾಜೀನಾಮೆ ನೀಡಿದ ಹೈಕೋರ್ಟ್ ಜಡ್ಜ್

ನಾಗ್ಪುರ: ಬಾಂಬೆ ಹೈಕೋರ್ಟ್ ನ ನಾಗ್ಪುರ ಬೆಂಚ್ ನ ಜಡ್ಜ್ ನ್ಯಾ. ರೋಹಿತ್ ಡಿಯೊ ಅವರು ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಕೋರ್ಟ್ ಕಲಾಪದಲ್ಲೇ ತನ್ನ ರಾಜೀನಾಮೆ ಬಗ್ಗೆ ಘೋಷಣೆ ಮಾಡಿದ ಅವರು, ‘ನನಗೆ ಸ್ವಾಭಿಮಾನದ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

“ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಲು ವಿಷಾದಿಸುತ್ತೇನೆ. ನನ್ನ ಆತ್ಮಗೌರವಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡಿ” ಎಂದು ನ್ಯಾಯಮೂರ್ತಿ ರೋಹಿತ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ ಹೇಳಿದರು.

ಆದರೆ ತನ್ನ ರಾಜೀನಾಮೆಗೆ ನಿಖರ ಕಾರಣವನ್ನು ಅವರು ಬಹಿರಂಗ ಪಡಿಸಿಲ್ಲ. ಹಲವು ಸಂದರ್ಭಗಳಲ್ಲಿ ಕಟ್ಟುನಿಟ್ಟಾಗಿ ವರ್ತಿಸಿದ್ದಕ್ಕಾಗಿ ವಕೀಲರ ಬಳಿ ಅವರು ಕ್ಷಮೆ ಕೇಳಿದರು.

“ಸಭಾಂಗಣದಲ್ಲಿ ಹಾಜರಿರುವ ವಕೀಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ಸುಧಾರಣೆ ಕಾಣಬೇಕು ಎಂಬ ಉದ್ದೇಶದಿಂದ ನಾನು ನಿಮಗೆ ಹಲವು ಬಾರಿ ಗದರಿದ್ದೇನೆ. ಆದರೆ ನಿಮಗೆ ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನಲ್ಲಿಲ್ಲ. ಯಾಕೆಂದರೆ ನೀವು ನನ್ನ ಕುಟುಂಬ ಇದ್ದಂತೆ” ಎಂದು ಅವರು ಹೇಳಿದರು.

ನ್ಯಾಯಮೂರ್ತಿಗಳ ದಿಢೀರ್ ನಿರ್ಧಾರ ಕೇಳಿ ವಕೀಲರು ಅಚ್ಚರಿ ಪಟ್ಟರು.

ನ್ಯಾ.ರೋಹಿತ್ ಡಿಯೋ ಅವರು ಜೂನ್ 2017 ರಲ್ಲಿ ಬಾಂಬೆ ಹೈಕೋರ್ಟ್‌ ನ ನ್ಯಾಯಾಧೀಶರಾಗಿ ನೇಮಕಗೊಂಡರು. 2025 ರ ಡಿಸೆಂಬರ್ ನಲ್ಲಿ ಅವರು ನಿವೃತ್ತರಾಗಬೇಕಿತ್ತು.

Join Whatsapp
Exit mobile version