ರಾಂಚಿ: ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪದ ತ್ರಿಕುಟ್ ಬೆಟ್ಟದಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದಾಗಿ ಕೇಬಲ್ ಕಾರುಗಳ ಮಧ್ಯೆ ಈ ದುರ್ಘಟನೆ ನಡೆದಿದ್ದು, ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಕನಿಷ್ಠ 12 ಕ್ಯಾಬಿನ್ ಗಳಲ್ಲಿ ಸುಮಾರು 48 ಜನರು ಇನ್ನೂ ಸಿಲುಕಿಕೊಂಡಿದ್ದಾರೆ ಮತ್ತು ವಾಯುಪಡೆಯ ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಳಿಕ ಸಂಸ್ಥೆಯ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಯನ್ನು ಸ್ಥಳಕ್ಕೆ ಕರೆಯಿಸಲಾಗಿದೆ ಎಂದು ದಿಯೋಘರ್ ಉಪ ಆಯುಕ್ತ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚಂದ್ರ ಜಾಟ್ ಅವರ ಜಂಟಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ರೋಪ್‌ವೇ ಸುಮಾರು 766-ಮೀಟರ್ ಉದ್ದವಿದ್ದರೆ, ಬೆಟ್ಟವು 392-ಮೀಟರ್ ಎತ್ತರವಿದೆ.
ರೋಪ್‌ವೇಯಲ್ಲಿ 25 ಕ್ಯಾಬಿನ್‌ಗಳಿವೆ. ಪ್ರತಿ ಕ್ಯಾಬಿನ್‌ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು.