ಮುಂಬೈ: ಬಿಜೆಪಿಯೆಂದರೆ ಹಿಂದುತ್ವವಲ್ಲ, ಶಿವಸೇನೆ ಬಿಜೆಪಿಯಿಂದ ಹೊರಬಂದಿದೆಯೇ ಹೊರತು ಹಿಂದುತ್ವದ ಸಿದ್ಧಾಂತದಿಂದ ಹೊರಬಂದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕೋಲ್ಹಾಪುರ-ಉತ್ತರ ವಿಧಾನಸಭೆಯ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಠಾಕ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರದ ಮೋಹಕ್ಕಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಬಿಜೆಪಿಯದ್ದು ಅಧಿಕಾರಕ್ಕಾಗಿನ ದಾಹದ ಹಿಂದುತ್ವ, ಅಧಿಕಾರಕ್ಕಾಗಿ ಯಾವ ಹಂತಕ್ಕೂ ಅವರು ಹೋಗುತ್ತಾರೆ. ಜನರು ಬಿಜೆಪಿಯ ಹಿಂದುತ್ವವನ್ನು ನಂಬಬಾರದು ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಶಿವಸೇನೆ ಕಾರ್ಯಕರ್ತರು, ನಾಯಕರಿಗೆ ಉದ್ಧವ್ ವಿನಂತಿಸಿದ್ದಾರೆ. ಹಿಂದೂಗಳಿಗೆ ಸಮಸ್ಯೆಯಾದಾಗ ರಕ್ಷಣೆ ನೀಡಲು ಮುಂದೆ ಬರುವ ನಿಜವಾದ ಹಿಂದುತ್ವದ ಪಕ್ಷ ಶಿವಸೇನೆಯಾಗಿದೆ ಎಂದು ಅವರು ಹೇಳಿದ್ದಾರೆ.