Home ಟಾಪ್ ಸುದ್ದಿಗಳು ಬಯಲಾದ ಬಿಜೆಪಿಯ ಭ್ರಷ್ಟಾಚಾರ; ಮುಖ್ಯಮಂತ್ರಿ ರಾಜೀನಾಮೆಗೆ ಎಎಪಿ ಆಗ್ರಹ

ಬಯಲಾದ ಬಿಜೆಪಿಯ ಭ್ರಷ್ಟಾಚಾರ; ಮುಖ್ಯಮಂತ್ರಿ ರಾಜೀನಾಮೆಗೆ ಎಎಪಿ ಆಗ್ರಹ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವು ಪೊಲೀಸ್‌ ಇಲಾಖೆಯಲ್ಲಿ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಹೃದಯಘಾತದಿಂದ ಮೃತಪಟ್ಟ ಇನ್‌ಸ್ಪೆಕ್ಟರ್‌ ಎಚ್‌.ಎಲ್‌.ನಂದೀಶ್‌ರವರ ಅಂತಿಮ ದರ್ಶನ ಪಡೆಯಲು ಹೋಗುತ್ತಿದ್ದ ಸಂದರ್ಭದಲ್ಲಿ, ಪೊಲೀಸ್‌ ಇನ್ ಸ್ಪೆಕ್ಟರ್‌  ಆಗಲು 70 ಲಕ್ಷ ನೀಡಿದ್ದರೆಂದು ಸಚಿವ ಎಂಟಿಬಿ ನಾಗರಾಜ್‌ ಹೇಳಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜವಾಬ್ದಾರಿಯುತ ಹುದ್ದೆಗಳನ್ನು ಬೃಹತ್‌ ಮೊತ್ತದ ಹಣಕ್ಕೆ ಮಾರಾಟ ಮಾಡಲಾಗುತ್ತಿರುವುದು ಸಚಿವರ ಮಾತಿನಿಂದ ಸಾಬೀತಾಗಿದೆ. 40% ಭ್ರಷ್ಟಾಚಾರ ಆರೋಪಕ್ಕೆ ಇಷ್ಟು ದಿನ ಸಾಕ್ಷಿ ಕೇಳುತ್ತಿದ್ದ ಬಿಜೆಪಿ ನಾಯಕರಿಗೆ ಅವರ ಸಚಿವರೇ ಬಾಯ್ಬಿಟ್ಟಿರುವುದರಿಂದ ಸಾಕ್ಷಿ ಸಿಕ್ಕಂತಾಗಿದೆ” ಎಂದು ಹೇಳಿದರು.

ಸಚಿವ ಎಂಟಿಬಿ ನಾಗರಾಜ್‌ ನೀಡಿದ ಹೇಳಿಕೆ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಸರ್ಕಾರಿ ಹುದ್ದೆ ಪಡೆಯಲು ನೀಡುವ ಲಕ್ಷಗಟ್ಟಲೆ ಹಣದಲ್ಲಿ ಯಾರಿಗೆ ಎಷ್ಟು ಪಾಲು ಹೋಗುತ್ತಿದೆ ಎಂಬುದು ಬಹಿರಂಗವಾಗಬೇಕು. ಅದಕ್ಕಿಂತ ಮೊದಲು ಎಂಟಿಬಿ ನಾಗರಾಜ್‌ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಭ್ರಷ್ಟಾಚಾರವನ್ನು ಸಚಿವರೇ ಒಪ್ಪಿಕೊಂಡಿರುವುದರಿಂದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.

“ಸರ್ಕಾರದ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲು ಮಾಡಬಾರದೆಂದು ಬಿಜೆಪಿಯು ಹಲವು ಪತ್ರಕರ್ತರಿಗೆ 2.5 ಲಕ್ಷ ರೂಪಾಯಿಯನ್ನು ದೀಪಾವಳಿ ಉಡುಗೊರೆಯೆಂದು ನೀಡಲಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರವನ್ನು ಬಿಜೆಪಿ ಹಾಳು ಮಾಡುತ್ತಿದೆ. 40% ಕಮಿಷನ್‌ ಹಣವನ್ನು ಈ ರೀತಿಯ ಪ್ರಜಾಪ್ರಭುತ್ವವಿರೋಧಿ ಕೃತ್ಯಳಿಗೆ ಬಿಜೆಪಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಪತ್ರಕರ್ತರು ಬಿಜೆಪಿಯ ಈ ಆಮಿಷವನ್ನು ವಾಪಸ್‌ ಮಾಡಿರುವುದು ಶ್ಲಾಘನೀಯ” ಎಂದು ಜಗದೀಶ್‌ ವಿ. ಸದಂ ಹೇಳಿದರು

Join Whatsapp
Exit mobile version