Home ಟಾಪ್ ಸುದ್ದಿಗಳು ಬಿಜೆಪಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ: ಡಿ ಕೆ ಶಿವಕುಮಾರ್

ಬಿಜೆಪಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ: ಡಿ ಕೆ ಶಿವಕುಮಾರ್

ಹಾಸನ: ಪೆಟ್ರೋಲ್, ಡೀಸೆಲ್, ರಸಗೊಬ್ಬರದ ಬೆಲೆ ಎಲ್ಲವೂ ಏರಿಕೆ ಆಗಿದ್ದು, ಬಿಜೆಪಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪಂಚರಾಜ್ಯ ಚುನಾವಣೆಯಲ್ಲಿ ನಾವು ಪಂಜಾಬ್ ರಾಜ್ಯವನ್ನು ನಮ್ಮ ತಪ್ಪಿನಿಂದ ಕಳೆದುಕೊಂಡಿದ್ದೇವೆ. ಬಿಜೆಪಿಯವರು ಕರ್ನಾಟಕದಲ್ಲಿಯೂ ಗೆಲ್ಲುವುದಾಗಿ ಬೀಗುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ 63 ಲಕ್ಷ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ತರಲು ಅವರೆಲ್ಲ ಸದಸ್ಯರಾಗುತ್ತಿರುವುದು ಸ್ಪಷ್ಟವಾಗಿದೆ. ಇಡೀ ರಾಜ್ಯದಲ್ಲಿ ಜನ ಬಿಜೆಪಿ ಹಾಗೂ ದಳದಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್ ಸದಸ್ಯರಾಗುತ್ತಿದ್ದು, ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.

ರೈತರು ನೆಮ್ಮದಿಯಾಗಿಲ್ಲ, ಕೈಗಾರಿಕೆಗಳಿಗೆ ಬಂಡವಾಳ ಬರುತ್ತಿಲ್ಲ. ವ್ಯಾಪಾರಸ್ಥರಿಗೂ ತೊಂದರೆ ಆಗಿದೆ. ಪ್ರತಿ ಜಿಲ್ಲೆಯಲ್ಲಿ ಕೋಮುವಾದ ಹರಡುತ್ತಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ನಾವು ಹೇಳಬೇಕಾಗಿಲ್ಲ. ನಮ್ಮ ರಾಜ್ಯದವರೇ ಕೃಷಿ ಸಚಿವರಾಗಿದ್ದರೂ, ರಾಗಿ, ಜೋಳ, ತೊಗರಿ ಸೇರಿದಂತೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ. ಅನ್ಯಾಯ ಮುಂದುವರಿದಿದೆ, ಜನ ಅರ್ಥ ಮಾಡಿಕೊಂಡಿದ್ಧಾರೆ, ಚುನಾವಣೆ ಬರಲಿ, ಅವಕಾಶ ಸಿಗಲಿ ಅಂತ ಕಾಯುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಕಷ್ಟದ ಪರಿಸ್ಥಿತಿಯಲ್ಲಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ.  ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆ, ಕೃಷಿ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ನಮ್ಮ ರಾಜ್ಯ ಮುಂಚೂಣಿಯಲ್ಲಿತ್ತು.  ಎಲ್ಲ ವರ್ಗದ ಜನರನ್ನು ಗೌರವಿಸಿ, ಕೋಮು ಗಲಭೆ ಆಗದಂತೆ ನೋಡಿಕೊಳ್ಳಬೇಕು. ರಾಜ್ಯದ ಘನತೆಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು .

Join Whatsapp
Exit mobile version