Home ಟಾಪ್ ಸುದ್ದಿಗಳು ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಬಿಡುಗಡೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ; ನ್ಯಾ. ಯು ಡಿ ಸಾಲ್ವಿ

ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಬಿಡುಗಡೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ; ನ್ಯಾ. ಯು ಡಿ ಸಾಲ್ವಿ

ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲಾ 11 ಅಪರಾಧಿಗಳನ್ನು ಕ್ಷಮಾಪಣೆ ನೀತಿ ಮೇರೆಗೆ ಬಿಡುಗಡೆಗೊಳಿಸಿರುವ ಗುಜರಾತ್ ಸರ್ಕಾರದ ನಿರ್ಧಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಲಿದೆ ಎಂದು ಬಾಂಬೆ ಹೈಕೋರ್ಟ್ ನ ನಿವೃತ್ತ ನ್ಯಾ. ಯು ಡಿ ಸಾಲ್ವಿ ಅವರು ಹೇಳಿದ್ದಾರೆ.

ಸಾಲ್ವಿ ಅವರು ಪ್ರಕರಣದ ವಿಚಾರಣಾ ನ್ಯಾಯಾಧೀಶರಾಗಿ ಹನ್ನೊಂದು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದರು. ಗುಜರಾತ್ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ಮುಂದಿನ ದಿನಗಳಲ್ಲಿ ವ್ಯಾಪಕ ಪರಿಣಾಮವನ್ನು ಬೀರಲಿದೆ ಎಂದರು.

ಗುಜರಾತ್ ಸರ್ಕಾರದ ನಡೆಯನ್ನು ಸ್ಪಷ್ಟ ಶಬ್ದಗಳಲ್ಲಿ ಖಂಡಿಸಿದ ಅವರು, “ಈ ನಿರ್ಧಾರದ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಇದು ತಪ್ಪು ಎಂದು ನಾನು ಹೇಳುತ್ತೇನೆ. ಇದನ್ನು ಮುಂದಿರಿಸಿಕೊಂಡು ಇತರೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಅಪರಾಧಿಗಳು ಸಹ ಇಂತಹದ್ದೇ ಪರಿಹಾರ ಕೋರಲಿದ್ದಾರೆ” ಎಂದು ತಮ್ಮ ಅಸಮ್ಮತಿ ಸೂಚಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿರುವ ಬೆನ್ನಿಗೆ ಅವರ ತವರು ರಾಜ್ಯದಲ್ಲಿಯೇ ಅಸಹಾಯಕ ಹೆಣ್ಣುಮಗಳೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದವರನ್ನು ಸರ್ಕಾರವು ಬಿಡುಗಡೆ ಮಾಡಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ನ್ಯಾ. ಸಾಲ್ವಿ ಅವರು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ 2008ರಲ್ಲಿ ಹನ್ನೊಂದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದರು. ಏಳು ಮಂದಿಯನ್ನು ಅವರು ಆರೋಪ ಮುಕ್ತಗೊಳಿಸಿದ್ದರು. ಪ್ರಕರಣದಲ್ಲಿ ಹನ್ನೊಂದು ಮಂದಿಗೆ ಶಿಕ್ಷೆ ನೀಡಿರುವುದನ್ನು ಬಾಂಬೆ ಹೈಕೋರ್ಟ್ 2017ರಲ್ಲಿ ಎತ್ತಿ ಹಿಡಿದಿತ್ತು. ಅಲ್ಲದೆ, ನ್ಯಾ. ಸಾಲ್ವಿ ಅವರು ಬಿಡುಗಡೆ ಮಾಡಿದ್ದ ಏಳು ಮಂದಿಗೂ ಹೈಕೋರ್ಟ್ ಶಿಕ್ಷೆ ನೀಡಿತ್ತು.

(ಕೃಪೆ: ಬಾರ್ & ಬೆಂಚ್)

Join Whatsapp
Exit mobile version