Home ಟಾಪ್ ಸುದ್ದಿಗಳು ರಾಜ್ಯ ಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ ನಡೆ ವಿರುದ್ಧ ಸಿದ್ದು ಕಿಡಿ

ರಾಜ್ಯ ಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ ನಡೆ ವಿರುದ್ಧ ಸಿದ್ದು ಕಿಡಿ

ಹಾಸನ: ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಶುಕ್ರವಾರ ರಾತ್ರಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ, ಇದು ಅಪಪ್ರಚಾರ ಆಗಿದೆ ಎಂದು ಸ್ಪಷ್ಟಪಡಿಸಿದರು.


ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ, ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು. ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಹೇಳಿದರು.

ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಕೋಮುವಾದದ ಅಜೆಂಡಾ ಇಟ್ಟುಕೊಂಡು ಇದೆಲ್ಲವನ್ನೂ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರ ಮಾಡಬೇಕೆಂಬುದು ಅವರ ಅಜೆಂಡಾ, ಅದನ್ನು ಮಾಡಲು ಹೋಗುತ್ತಿದ್ದಾರೆ. ಆದರೆ ಸಂವಿಧಾನದಲ್ಲಿ ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು, ಸಮನಾಗಿ ಗೌರವಿಸಬೇಕು, ಎಲ್ಲರಿಗೂ ಕೂಡ ಕಾನೂನು ರಕ್ಷಣೆ ಕೊಡಬೇಕು, ತಾರತಮ್ಯ ಮಾಡಬಾರದು ಎಂದು ಹೇಳಲಾಗಿದೆ. ಆದರೆ ಬಿಜೆಪಿಯವರು ತಾರತಮ್ಯ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.


ಮುಖ್ಯಮಂತ್ರಿ ಅವರು ಪ್ರವೀಣ್ ನೆಟ್ಟಾರು ಮನೆಗೆ ತೆರಳಿ ಪರಿಹಾರ ನೀಡಿದರು. ಆದರೆ ಕೊಲೆಯಾಗಿದ್ದ ಇಬ್ಬರು ಮುಸ್ಲಿಂ ಯುವಕರ ಮನೆಗೆ ಭೇಟಿ ಕೊಡಲಿಲ್ಲ. ತೆರಿಗೆ ಹಣದಲ್ಲಿ ಪರಿಹಾರ ಕೊಡುವುದನ್ನು ಎಲ್ಲರಿಗೂ ಕೊಡಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ನಾನು ಹೋದ ಕಡೆಯಲ್ಲೆಲ್ಲಾ ಕುಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಇದು ಪ್ರಾಯೋಜಿತ ಹೋರಾಟ ಎಂದು ದೂರಿದ ಸಿದ್ದರಾಮಯ್ಯ, ನಾನು ಹಿಂದೂ ಮಹಾಸಭಾದ ಸಾವರ್ಕರ್ ಬಗ್ಗೆ ಮಾತಾಡಿದೆ ಅಂತ ಹೀಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೆಯೇ, ಗುಪ್ತಚರ ಇಲಾಖೆ ಇದೆಯೇ ಎಂಬ ಅನುಮಾನ ಮೂಡಿದೆ ಎಂದು ಕಿಡಿ ಕಾರಿದರು.


ಸಚಿವ ಮಾಧುಸ್ವಾಮಿ, ನಾವು ಸರ್ಕಾರ ನಡೆಸುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಂತ ಹೇಳಿರುವುದರ ಅರ್ಥ ಏನು ಎಂದು ಪ್ರಶ್ನಿಸಿದ ಸಿದ್ದು, ಬಿಜೆಪಿಯವರು ನೀಚರು, ನೀಚ ಕೆಲಸ ಮಾಡಲು ತಯಾರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ದಾವಣಗೆರೆ ಸಮಾವೇಶ ನಂತರ ಭಯಗೊಂಡಿದ್ದಾರೆ. ಮುಂದಿನ ಚುನಾವಣೆ ಸೋಲುತ್ತೇವೆ ಎಂದು ತಿಳಿದು ಹೀಗೆಲ್ಲಾ ಮಾಡ್ತಾ ಇದ್ದಾರೆ. ನಾನು ಆ.26 ರಂದು ಕೊಡಗಿಗೆ ಹೋಗಿ ಎಸ್ಪಿ ವಿರುದ್ಧ ದೊಡ್ಡ ಪ್ರತಿಭಟನೆ ಮಾಡುತ್ತೇನೆ. ಮಡಿಕೇರಿಯ ಹಲವೆಡೆ ನನ್ನ ವಿರುದ್ಧ ಗೋ ಬ್ಯಾಕ್ ಸಿದ್ದರಾಮಯ್ಯ ಅಂಥ ಘೋಷಣೆ ಕೂಗಿದರು. ಪೊಲೀಸರು ರೌಂಡ್ ಅಪ್ ಮಾಡಿ ಅವರನ್ನು ಕರೆದುಕೊಂಡು ಆಗ್ತಿರ್ಲಿಲ್ವಾ, ಆದೇನ್ ದೊಡ್ಡ ಕೆಲಸನಾ? ಪೊಲೀಸರು ಸುಮ್ಮನೆ ನಿಂತಿದ್ದರು ಎಂದು ದೂರಿದರು. ಬಿಜೆಪಿ ಕುಮ್ಮಕ್ಕಿನಿಂದಲೇ ಆರ್‌ಎಸ್‌ಎಸ್, ಭಜರಂಗದಳದ ಹುಡುಗರು ಕಪ್ಪು ಬಾವುಟ ತೋರಿಸುತ್ತಿದ್ದಾರೆ. ಕಪ್ಪು ಬಾವುಟ ತೋರಿಸೋದು, ಹಿಡಿಯೋದು ಧೀರರ, ವೀರರ ಕೆಲ್ಸಾನಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ರಾಜ್ಯದ 18 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. 5.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇವತ್ತಿನವರೆಗೂ ಸರ್ವೆ ಮಾಡಿಲ್ಲ, ಬೆಳೆ ಹಾನಿ ಅಂದಾಜು ಮಾಡಿಲ್ಲ. ಯಾವ ಸಚಿವರೂ, ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಪರಿಹಾರ ಕೊಟ್ಟಿದ್ದೀವಿ ಅಂತಾರೆ, ರೈತರಿಗೆ ತಲುಪಿದೆಯಾ. ಎಲ್ಲಾ ರೈತರು ಸಾಲ ಮಾಡಿಯೇ ಬಿತ್ತನೆ ಮಾಡೋದು, ಮಳೆ ಹಾನಿಯಿಂದ ನಷ್ಟವಾಗಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳೋದು. ಸರ್ಕಾರ ಪರಿಹಾರ ಕೊಟ್ಟಿದ್ದೇವೆ ಅಂತಿದೆ, ಆದರೆ ಗ್ರೌಂಡ್ ರಿಯಾಲಿಟಿ ಬೇರೆ ಇದೆ. ಇದರಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ.


ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲ್ಲಿಯವರೆಗೂ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಹಾಳಾಗಿರುವ ಮನೆ ಕಟ್ಟಿಕೊಡಲು ಪ್ರಯತ್ನ ಮಾಡಿಲ್ಲ. ಮೂಡಿಗೆರೆಯಲ್ಲಿ 2019 ರಲ್ಲಿ ಮಳೆಯಿಂದ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ.

Join Whatsapp
Exit mobile version