Home ಟಾಪ್ ಸುದ್ದಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವೆರೆಗೆ 116 ಡೆಂಗಿ ಪ್ರಕರಣಗಳು ಪತ್ತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವೆರೆಗೆ 116 ಡೆಂಗಿ ಪ್ರಕರಣಗಳು ಪತ್ತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವೆರೆಗೆ 116 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಜನರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಹೇಳಿದ್ದಾರೆ.

ಡೆಂಗಿ, ಚಿಕುನ್ ಗುನ್ಯಾ ಹಾಗೂ ಮಲೇರಿಯಾ ಕಾಯಿಲೆ ನಿಯಂತ್ರಣ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 79, ತರೀಕೆರೆ 10, ಶೃಂಗೇರಿಯಲ್ಲಿ 12 ಡೆಂಗಿ ಜ್ವರದ ಪ್ರಕರಣ ಕಂಡು ಬಂದಿದ್ದು, ಕಡೂರು ತಾಲ್ಲೂಕಿನಲ್ಲಿ 6, ಮೂಡಿಗೆರೆ ಮತ್ತು ನರಸಿಂಹರಾಜಪುರದಲ್ಲಿ ತಲಾ 2 ಹಾಗೂ ಕೊಪ್ಪದಲ್ಲಿ 5 ಪ್ರಕರಣ ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ.

ಡೆಂಗಿ ಜ್ವರ ವೈರಸ್‌ನಿಂದ ಬರುವ ಕಾಯಿಲೆ. ಸೋಂಕು ಇರುವ ಈಡಿಸ್‌ ಇಜಿಪೈ ಎಂಬ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದರಿಂದ ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಮಾಂಸಖಂಡ, ಕೀಲುಗಳಲ್ಲಿ ನೋವು, ಮೂಗು ಬಾಯಿ, ವಸಡುಗಳಿಂದ ರಕ್ತಸ್ರಾವ ಮೊದಲಾದ ಲಕ್ಷಣಗಳು ಕಂಡು ಬರುತ್ತವೆ. ಹಾಗಾಗಿ ನಿರ್ಲಕ್ಷ್ಯ ವಹಿಸದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲ. ಆದ್ದರಿಂದ ಮನೆಗಳಲ್ಲಿ ಸೊಳ್ಳೆಗಳು ಬಾರದಂತೆ ನಿಯಂತ್ರಣ ವಹಿಸಬೇಕು. ಮನೆಯ ತೊಟ್ಟಿಗಳಲ್ಲಿ ದೀರ್ಘಕಾಲದವರೆಗೆ ನೀರು ಸಂಗ್ರಹ ಮಾಡದೆ ವಾರಕ್ಕೊಮ್ಮೆ ಖಾಲಿ ಮಾಡಿ, ಭರ್ತಿ ಮಾಡಬೇಕು. ಮನೆಯ ಮುಂದೆ ಎಳನೀರಿನ ಚಿಪ್ಪು, ಒಡೆದ ಬಾಟಲಿ ಮೊದಲಾದ ತ್ಯಾಜ್ಯ ಸಂಗ್ರಹವಾಗದಂತೆ ಹಾಗೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ..

Join Whatsapp
Exit mobile version