► ದಸರಾ ಮುಗಿದ ತಕ್ಷಣವೇ 1-5ನೇ ತರಗತಿ ಆರಂಭ
ಉಡುಪಿ: ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಆಯ್ಕೆಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ರೋಹಿತ್ ಚಕ್ರತೀರ್ಥ ಆಯ್ಕೆ ವಿರೋಧಿಸುತ್ತಿರುವ ಪ್ರಗತಿಪರರು ಎಲ್ಲವನ್ನೂ ವಿರೋಧಿಸುವ ಮಾನಸಿಕತೆ ಬಂದುಬಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಹೆಚ್ಚು ದಿನ ಕೂತ ಅನುಭವ ಇಲ್ಲ. ವಿರೋಧಪಕ್ಷದ ಸಂಸ್ಕೃತಿ ಕಾಂಗ್ರೆಸ್ ಕಲಿತಿಲ್ಲ. ಯಾವ ಕಾರಣಕ್ಕೆ ರೋಹಿತ್ ಚಕ್ರತೀರ್ಥ ಆಯ್ಕೆಯನ್ನು ವಿರೋಧಿಸುತ್ತೀರಿ ಎಂದು ನೀವು ಹೇಳಿ ಎಂದು ಸವಾಲು ಹಾಕಿದರು.
ಸಮಿತಿ ಅವಶ್ಯಕತೆ ಇಲ್ಲದಿದ್ದರೆ ಬರಗೂರು ರಾಮಚಂದ್ರಪ್ಪರನ್ನು ಯಾಕೆ ಈ ಹಿಂದೆ ಅಧ್ಯಕ್ಷ ಮಾಡಿದಿರಿ? ಎಂದು ಪ್ರಶ್ನಿಸಿದ ಅವರು, ಪಠ್ಯಪುಸ್ತಕಗಳನ್ನು ನೋಡಿದರೆ ಜನ ಹಿಡಿದುಕೊಂಡು ಹೊಡೆಯಬೇಕಿತ್ತು. ವಿವೇಕಾನಂದರ ಭಾಷಣವನ್ನೇ ಪಠ್ಯದಲ್ಲಿ ತಿರುಚಲಾಗಿತ್ತು. ಜ್ಞಾನಪೀಠ ಪಡೆದವರ ಪಾಠವನ್ನೇ ಕಿತ್ತು ಹಾಕಲಾಗಿತ್ತು. ವಾಲ್ಮೀಕಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹಾಋಷಿ ಯಾಗಿದ್ದಾ?, ವಾಲ್ಮೀಕಿಗೆ ಏಕವಚನವನ್ನು ಬಳಸಲಾಗಿತ್ತು. ಪುಸ್ತಕದ ಬಗ್ಗೆ ಸಾರ್ವಜನಿಕವಾಗಿ ಸಾವಿರಾರು ಆಪಾದನೆ ಬಂದವು. ವೈಯಕ್ತಿಕ ವೈಚಾರಿಕತೆಯಲ್ಲಿ ಮುಳುಗಿರುವವರು ಪ್ರಶ್ನೆ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪು ಎಲ್ಲಿ ಜಗಜ್ಜಾಹೀರಾಗಿತ್ತೋ ಎಂಬ ಭಯ ಕೆಲವರಿಗೆ ಇದೆ ಎಂದು ಬಿ.ಸಿ ನಾಗೇಶ್ ಹೇಳಿದರು.
ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಜೀರೋ ಇದೆ. ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯಲಿದ್ದಾರೆ. ಸಿಎಂ ಬೊಮ್ಮಾಯಿ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ. ದಸರಾ ಮುಗಿದ ತಕ್ಷಣ ಬಿಸಿಊಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ. ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ಲೈನ್ ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿವೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ. 90ರಷ್ಟು ಇದೆ ಎಂದು ಹೇಳಿದರು.