ಬೆಂಗಳೂರು: ಬೆಂಗಳೂರಿನಲ್ಲಿ ಬಿಜೆಪಿಯವರು ಕುತಂತ್ರ ನಡೆಸಿ ಬೇಕಾಬಿಟ್ಟಿ ತಮಗೆ ಅನುಕೂಲವಾಗುವಂತೆ ಮೀಸಲಾತಿಯನ್ನು ನಿಗದಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ 75ನೇ ಅಮೃತ ಮಹೋತ್ಸವ, ಬಿಬಿಎಂಪಿ ಚುನಾವಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ದಿನದಂದು ರಾಷ್ಟ್ರದ ಧ್ವಜ ಹಿಡಿದು ಪ್ರತಿ ಕ್ಷೇತ್ರದಲ್ಲಿ ನಡೆಯಬೇಕು. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ರಾಷ್ಟ್ರ ಮತ್ತು ಕಾಂಗ್ರೆಸ್ ಧ್ವಜ ಹಿಡಿದು ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕು. ಯಾರು ಕಾರ್ಪೋರೇಟರ್ ಆಗಬೇಕು ಎಂದು ಇದ್ದಿರೋ ಅವರು ಅಮೃತ ಮಹೋತ್ಸವ ಪಾದಯಾತ್ರೆಗೆ ಕನಿಷ್ಠ ಮೂರು ಸಾವಿರ ಮಂದಿಯನ್ನು ಕರೆದುಕೊಡು ಬರಬೇಕು. ಅಂತಹವರಿಗೆ ಮಾತ್ರ ಟಿಕೆಟ್ ಕೊಡಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ಬಿಜೆಪಿ ಯಾವುದೇ ಕುತಂತ್ರ ನಡೆಸಿ ವಾರ್ಡ್ ಮೀಸಲಾತಿ ಬದಲಾವಣೆ ಮಾಡಿದರೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸಂಪೂರ್ಣ ಜಯಗಳಿಸಲಿದೆ. ಕೊರೋನಾ ಸಂದರ್ಭದಲ್ಲಿ ಬಿಜೆಪಿ ಜನರಿಗೆ ಸರಿಯಾದ ರೀತಿಯಲ್ಲಿ ನೆರವು ನೀಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಉತ್ತಮ ಆಡಳಿತ ನಡೆಸಿ ಜನಪರ ಕಾರ್ಯಕ್ರಮಗಳನ್ನು ಜಾರಿ ತರಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ಕೇಶವಮೂರ್ತಿ ಮಾತನಾಡಿ, ನಾನು ಯಾರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದವೋ ಅವರು ಕುತಂತ್ರ ನಡೆಸಿ ನಾನು ಮತ್ತು ಶಿವರಾಜ್ ಸ್ಪರ್ಧೆ ಮಾಡುವ ವಾರ್ಡ್ ಗಳನ್ನು ಮಹಿಳೆ ಎಸ್.ಸಿ.ಕ್ಷೇತ್ರಗಳನ್ನಾಗಿ ಮಾಡಿದ್ದಾರೆ. ಆದರೂ ಮಹಾಲಕ್ಷ್ಮಿ ಪುರಂ ವಾರ್ಡ್ ನಿಂದ ತಮ್ಮ ಕಣಕ್ಕಿಳಿಸುವುದಾಗಿ ಘೋಷಿಸಿದರು.
ಸಚಿವರು ಶಾಸಕರಾದ ಗೋಪಾಲಯ್ಯನವರು ಮತ್ತೆ ತಾವು ಗೆದ್ದರೆ ಮೇಯರ್ ಆಗುತ್ತೇನೆ ಎಂಬ ಉದ್ದೇಶದಿಂದ ನನಗೆ ಟಿಕೆಟ್ ತಪ್ಪಿಸಲು ಮೀಸಲಾತಿ ಬದಲಾಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ತಮ್ಮನ್ನು ಬಳಸಿಕೊಂಡು ಒಕ್ಕಲಿಗ ಜನಾಂಗಕ್ಕೆ ಸೇರಿದ ತಮ್ಮನ್ನು ತುಳಿಯುವ ಕುತಂತ್ರ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಒಕ್ಕಲಿಗರು ತಮ್ಮಗೆ ತಕ್ಕ ಪಾಠ ಕಲಿಸಲಿದ್ದಾರೆ. ನಾನು ಅನೇಕ ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ತಮಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ಮಾಜಿ ಸಚಿವ ಎಚ್.ಎಮ್.ರೇವಣ್ಣ ಮಾತನಾಡಿ, ತಾವು ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿ ರಾಜಕಾರಣದಲ್ಲಿ ಬೆಳೆದು ಬಂದವರು. ಆದರೆ ಡಿ.ಕೆ. ಶಿವಕುಮಾರ್ ಅವರು ಇರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಮೇಲ್ಮಟ್ಟದಲ್ಲಿ ಬೆಳೆದು ಬಂದಿದ್ದಾರೆ. ಅವರು ಇನ್ನೂ ಉನ್ನತ ಸ್ಥಾನಮಾನವನ್ನು ಪಡೆಯಲಿ ಎಂದು ಹೇಳಿದರು.
ಸಮಾರಂಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜ್ ಕುಮಾರ್, ಬೆಂಗಳೂರು ಉತ್ತರ ಉಸ್ತುವಾರಿ ಮಂಜುನಾಥ್ ಭಂಡಾರಿ, ಭವ್ಯ ನರಸಿಂಹಮೂರ್ತಿ, ಬೇಗ್ ಮತ್ತಿತರರು ಹಾಜರಿದ್ದರು.