ಭೋಪಾಲ್: ಮಧ್ಯಪ್ರದೇಶದ ಧಾರಾ ಮತ್ತು ದಾಮೋಹ್ ಜಿಲ್ಲೆಗಳ ಪಂಚಾಯತಿಗಳಲ್ಲಿ ಪಂಚ ಮತ್ತು ಸರಪಂಚರಾಗಿ ಆಯ್ಕೆಯಾದ 15ಕ್ಕೂ ಹೆಚ್ಚು ಜನ ಮಹಿಳಾ ಪ್ರತಿನಿಧಿಗಳ ಗಂಡಂದಿರು ಅಧಿಕಾರಿಗಳ ಸಮ್ಮುಖದಲ್ಲಿ ಪಂಚಪತಿಗಳಾಗಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಬೆಳಕಿಗೆ ಬಂದಿದೆ.
ಚುನಾವಣಾ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ಇದು ಗೇಲಿ ಗೈದಂತಿದೆ. ಧಾರಾ ಜಿಲ್ಲೆಯಲ್ಲಿ ಇದನ್ನೂ ಮೀರಿ ನಿಯೋಜಿತ ಅಧಿಕಾರಿ ಪಕ್ಕದಲ್ಲಿ ನಿಂತಿದ್ದರೆ ಬಿಜೆಪಿ ನಾಯಕರೇ ಪ್ರಮಾಣವಚನ ಬೋಧಿಸಿದ್ದೂ ನಡೆಯಿತು. ಈ ಸಂಬಂಧ ದಾಮೋಹ್ ಪಂಚಾಯತ್ ಕಾರ್ಯದರ್ಶಿಯನ್ನು ಅಮಾನತು ಮಾಡಿದ್ದರೆ, ಧಾರಾ ಅಧಿಕಾರಿಗೆ ಶೋಕಾಸ್ ನೋಟೀಸು ನೀಡಲಾಗಿದೆ.
ಇಂಧೋರ್ ನಿಂದ 90 ಕಿಮೀ ದೂರದ ಧಾರಾ ಜಿಲ್ಲೆಯ ಸುಂದ್ರೆಲ್ ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಕೇಂದ್ರ ದಾಮೋಹ್ ನಿಂದ 65 ಕಿಮೀ ದೂರದ ಗೈಸಾಬಾದ್ ಪಂಚಾಯತಿಗಳಲ್ಲಿ ಈ ಘಟನೆ ನಡೆದಿದೆ.
ಪಂಚಾಯತ್ ಗೆ ಆಯ್ಕೆಯಾದ ರಾಧಾಬಾಯಿ, ಲಕ್ಷ್ಮಿಬಾಯಿ, ಕಿರಣ್ ಬಾಯಿ ಪ್ರೇಕ್ಷಕರ ನಡುವೆ ಕುಳಿತಿದ್ದರು. ವೇದಿಕೆಯಲ್ಲಿ ಅವರ ಗಂಡಂದಿರಿಗೆ ಬಿಜೆಪಿ ಸ್ಥಳೀಯ ನಾಯಕ ರಾಧೇಶ್ಯಾಂ ಕಸ್ರಾವಾಡಿಯಾ ಪ್ರಮಾಣವಚನ ಬೋಧಿಸಿದ್ದಾರೆ. ಅವರ ಗಂಡಂದಿರಾದ ಲಖನ್, ದಿಲೀಪ್, ಜೀವನ್ ಅವರು ತಾವೇ ಅಧಿಕಾರಕ್ಕೇರಿದವರು ಎಂಬಂತೆ ವರ್ತಿಸುತ್ತಿದ್ದ ವೀಡಿಯೋ ವೈರಲ್ ಆಗಿದೆ.
ವೇದಿಕೆಯ ಮೂಲೆಯಲ್ಲಿ ನಿಂತು ಐವರು ಮಹಿಳೆಯರೂ ಪ್ರಮಾಣವಚನ ಸ್ವೀಕರಿಸಿದರು. ವೀಡಿಯೋ ಹೊರ ಬೀಳುತ್ತಲೇ ಅದು ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಮಹಿಳೆಯರು ದೂರು ನೀಡಿದರೆ ಅವರ ಹಕ್ಕನ್ನು ರಕ್ಷಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
“ಇದು ಕರ್ತವ್ಯ ಲೋಪ” ಎಂದು ಧಾರಾ ಜಿ. ಪಂ. ಸಿಇಓ ಕೆ. ಎಲ್. ಮೀನಾ ಹೇಳಿದ್ದಾರೆ. ಸುಂದ್ರಲ್ ಗ್ರಾ.ಪಂ. ಕಾರ್ಯದರ್ಶಿ ಬಾದಾಮ್ ಸಿಂಗ್ ನಿಂಗ್ವಾಲ್ ಗೆ ನೋಟೀಸು ನೀಡಲಾಗಿದೆ. “ಸ್ಥಳೀಯ ರಾಜಕಾರಣಿಗಳು ಹೇಗೆ ಪ್ರಮಾಣವಚನ ಬೋಧಿಸಿದರು ಎಂಬುದನ್ನು ವಿಚಾರಿಸುವುದಾಗಿಯೂ ಮೀನಾ ತಿಳಿಸಿದ್ದಾರೆ.
ನನ್ನ ಆಕ್ಷೇಪಣೆಯನ್ನು ಮೀರಿ ಸ್ಥಳೀಯ ಬಿಜೆಪಿ ನಾಯಕ ಪ್ರಮಾಣವಚನ ಬೋಧಿಸಿದರು ಎಂದು ನಿಂಗ್ವಾಲ್ ಹೇಳುತ್ತಾರೆ. “ನಾವು ಎಲ್ಲ ಮಹಿಳಾ ಸದಸ್ಯರು ತಮ್ಮ ಕರ್ತವ್ಯ ನಿರ್ವಹಿಸುವಂತೆ ಮಾಡುತ್ತೇವೆ. ಅವರ ಗಂಡಂದಿರಿಗೆ ಪ್ರವೇಶ ಪಡೆಯಲು ಅವಕಾಶ ನೀಡುವುದಿಲ್ಲ” ಎಂದೂ ನಿಂಗ್ವಾಲ್ ಹೇಳಿದರು.
ಮಹಿಳೆಯರು ಯಾರೂ ದೂರು ನೀಡಿಲ್ಲವಾದ್ದರಿಂದ ಅವರ ಹಕ್ಕನ್ನು ಅವರು ಚಲಾಯಿಸಲಾರರು ಎಂಬ ಆತಂಕವನ್ನು ಮೀನಾ ವ್ಯಕ್ತಪಡಿಸಿದ್ದಾರೆ. ನಾವೇ ಅವರ ಹಕ್ಕನ್ನು ಅವರಿಗೆ ಮುಟ್ಟಿಸಲು ಏನಾದರೂ ಮಾಡದೆ ಬೇರೆ ದಾರಿಯಿಲ್ಲ ಎಂದೂ ಅವರು ಹೇಳಿದರು.
ಸರಪಂಚ ಸ್ಥಾನದ ಸಹಿತ 12 ಮಹಿಳೆಯರ ಬದಲು ಅವರ ಗಂಡಂದಿರು ದಾಮೋಹ್ ಜಿಲ್ಲೆಯಲ್ಲಿ ಪ್ರಮಾಣವಚನ ತೆಗೆದುಕೊಂಡರು. 12 ಮಹಿಳೆಯರೂ ಮನೆಯಿಂದ ಬಂದಿರಲೇ ಇಲ್ಲ. ಗ್ರಾಮ ಕಾರ್ಯದರ್ಶಿ ಧಾನು ಸಿಂಗ್ ಪ್ರಮಾಣವಚನ ಬೋಧಿಸಿದರು. ಗದ್ದಲ ಏರ್ಪಟ್ಟ ಕಾರಣ ಆ 12 ಜನರನ್ನೂ ಕತ್ತಲಾದ ಮೇಲೆ ಪಂಚಾಯತಿಗೆ ಕರೆಸಿಕೊಂಡು ಪ್ರಮಾಣವಚನ ಮತ್ತೆ ಬೋಧಿಸಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯತ್ ಸಿಇಓ ಶ್ರೀವಾತ್ಸವರು ಕೂಡಲೆ ವಿವರಣಾ ವರದಿ ನೀಡುವಂತೆ ಜನಪದ್ ಸಿಇಓ ಅವರಿಗೆ ಪತ್ರ ಬರೆದಿದ್ದಾರೆ.