ಕೊಲಂಬೊ: ಟಿ20 ಹಾಗೂ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಆತಿಥ್ಯ ವಹಿಸಲು ಅನುಮತಿ ಕೋರಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದೆ ಎಂದು ವರದಿಯಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು, ಇದೇ ವರ್ಷ ಆಗಸ್ಟ್ನಲ್ಲಿ ನಿಗದಿತ ಓವರ್ಗಳ ಸರಣಿಯಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಭದ್ರತೆಗೆ ಆತಂಕವಿರುವ ಕಾರಣ, ಭಾರತ ತಂಡವು ಸರಣಿಯಿಂದ ಹಿಂದೆ ಸರಿದಿದೆ. ಹೀಗಾಗಿ, ಈ ಸರಣಿಯನ್ನು 2026ರ ಸೆಪ್ಟೆಂಬರ್ಗೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ, ಲಂಕಾ ಮಂಡಳಿಯು ಬಿಸಿಸಿಐಗೆ ಮನವಿ ಮಾಡಿದೆ ಎನ್ನಲಾಗಿದೆ.
ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಯೋಜಿಸುವುದಾಗಿ ಲಂಕಾ ಮಂಡಳಿ ಹೇಳಿದೆ. ಬಾಂಗ್ಲಾ ವಿರುದ್ಧವೂ ಇಷ್ಟೇ ಪಂದ್ಯಗಳು ನಿಗದಿಯಾಗಿದ್ದವು.
ಲಂಕಾ ಮಂಡಳಿಯ ಪ್ರಸ್ತಾವನೆಗೆ ಬಿಸಿಸಿಐ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
