Home ಟಾಪ್ ಸುದ್ದಿಗಳು ಮೈಕ್ರೋವೇವ್ ಓವನ್’ನಲ್ಲಿ ಹೆಣ್ಣು ಮಗು ಶವವಾಗಿ ಪತ್ತೆ, ತಾಯಿ ಶಂಕಿತೆ: ದೆಹಲಿ ಪೊಲೀಸ್

ಮೈಕ್ರೋವೇವ್ ಓವನ್’ನಲ್ಲಿ ಹೆಣ್ಣು ಮಗು ಶವವಾಗಿ ಪತ್ತೆ, ತಾಯಿ ಶಂಕಿತೆ: ದೆಹಲಿ ಪೊಲೀಸ್

ನವದೆಹಲಿ: ದಕ್ಷಿಣ ದಿಲ್ಲಿಯ ಚಿರಾಗ್ ಎಂಬಲ್ಲಿ ಎರಡು ತಿಂಗಳ ಹೆಣ್ಣು ಮಗುವೊಂದು ಮೈಕ್ರೋವೇವ್ ಓವನ್’ನಲ್ಲಿ ಶವವಾಗಿ ಪತ್ತೆಯಾಗಿದ್ದು, ತಾಯಿಯೇ ಈ ಕುಕೃತ್ಯದಲ್ಲಿ ಪಾಲ್ಗೊಂಡಿರುವ ಕುರಿತು ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಬೆನಿಟಾ ಮೇರಿ ಜೈಕರ್, ಸೋಮವಾರ ಮಧ್ಯಾಹ್ನ ಸುಮಾರು 3.15ಕ್ಕೆ ಮಗುವಿನ ಸಾವಿನ ಬಗ್ಗೆ ಮಾಹಿತಿ ಲಭಿಸಿದ್ದು, ಸಾಧ್ಯವಿರುವ ಎಲ್ಲಾ ಆಯಾಮಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗಿದೆ. ಶಿಶುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಠಾಣೆಗೆ ಕರೆಯಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಗುವಿನ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ಪ್ರಕರಣದ ಪ್ರಮುಖ ಶಂಕಿತೆ ಆಗಿರುವ ಮಗುವಿನ ತಾಯಿಯು, ಹೆಣ್ಣು ಮಗು ಜನನದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಅನನ್ಯಾ ಈ ವರ್ಷದ ಜನವರಿಯಲ್ಲಿ ಜನಿಸಿದ್ದು, ಈ ಸಂದರ್ಭದಲ್ಲಿ ಮಗುವಿನ ತಾಯಿ ಎಂಎಸ್ ಕೌಶಿಕ್ ತೀವ್ರ ಅಸಮಾಧಾನಗೊಂಡಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಪತಿಯೊಂದಿಗೆ ಆಗಾಗ ಜಗಳವಾಡಿದ್ದರು ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

Join Whatsapp
Exit mobile version