Home ಟಾಪ್ ಸುದ್ದಿಗಳು ಬಿಡಿಎಯ 9 ಬ್ರೋಕರ್ ಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ಬಿಡಿಎಯ 9 ಬ್ರೋಕರ್ ಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ಮನೆ, ಕಚೇರಿಗಳ ದಾಳಿ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮೊದಲ ಬಾರಿಗೆ, ಬ್ರೋಕರ್ ಗಳ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿಗಳನ್ನು ಪತ್ತೆಮಾಡಿದ್ದಾರೆ.

ಬಿಡಿಎ ನಲ್ಲಿ ಮಧ್ಯ ವರ್ತಿ (ಬ್ರೋಕರ್) ಗಳಾಗಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪಾಸ್ತಿಗಳನ್ನು ಗಳಿಸಿರುವ ಮಾಹಿತಿಯನ್ನು ಕಲೆಹಾಕಿ 9 ಮಂದಿ ಬ್ರೋಕರ್ ಗಳನ್ನು ಬಲೆಗೆ ಕೆಡವಿರುವ ಎಸಿಬಿ ಅಧಿಕಾರಿಗಳು  ಅವರ ಮನೆ, ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಗಾಳ ಹಾಕಿ ಅಕ್ರಮ ಆಸ್ತಿ ಪಾಸ್ತಿಗಳನ್ನು ಜಾಲಾಡುತ್ತಿದ್ದ ಎಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಬ್ರೋಕರ್ ಗಳ ಅಕ್ರಮಗಳ ಪರಿಶೀಲನೆ ಕೈಗೊಂಡಿದ್ದಾರೆ.

ಎಸಿಬಿ ಎಸ್ ಪಿ ಉಮಾ ಪ್ರಶಾಂತ್ ಅವರ ನೇತೃತ್ವದ 100ಕ್ಕೂ ಹೆಚ್ಚು ಅಧಿಕಾರಿಗಳು ಚಾಮರಾಜಪೇಟೆ, ದೊಮ್ಮಲೂರು, ಮಲ್ಲತ್ತಹಳ್ಳಿ, ಮನೋರಾಯನಪಾಳ್ಯ,ಸೇರಿದಂತೆ ನಗರದ  9 ಕಡೆ ದಾಳಿ ಮಾಡಿದ್ದಾರೆ.

ಬ್ರೋಕರ್ ಗಳಾದ ರಘು ಬಿ ಎನ್.ಚಾಮರಾಜಪೇಟೆ, ಮೋಹನ್ ಮನೋರಾಯನಪಾಳ್ಯ, ಮನೋಜ್ ದೊಮ್ಮಲೂರು, ಮುನಿರತ್ನ ರತ್ನವೇಲು ಮಲ್ಲತ್ತಹಳ್ಳಿ, ತೇಜುತೇಜಸ್ವಿ ಆರ್ಆರ್ ನಗರ, ಅಶ್ವತ್ ಮುದ್ದಿನಪಾಳ್ಯ, ಲಕ್ಷ್ಮಣ ಚಾಮುಂಡೇಶ್ವರಿ ನಗರ, ಚಿಕ್ಕಹನುಮ್ಮಯ್ಯ ಮುದ್ದಿನಪಾಳ್ಯ ಎಂಬವರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು, ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ದೊಮ್ಮಲೂರಿನ ಬಿಡಿಎ ಬ್ರೋಕರ್ ಮನೋಜ್ ಮನೆಯಲ್ಲಿ ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಬ್ರಾಂಡ್ನ ಸನ್ ಗ್ಲಾಸಸ್ ಹಾಗೂ ವಾಚ್ ಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೋಕರ್ ಗಳ ಮನೆ ಮೇಲೆ ಮುಂಜಾನೆಯಿಂದ ನಡೆದಿರುವ ದಾಳಿಯು ಮಧ್ಯಾಹ್ನದವರೆಗೆ ಮುಂದುವರೆದಿದ್ದು ಅಕ್ರಮ ಆಸ್ತಿಪಾಸ್ತಿಯ ಒಟ್ಟಾರೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Join Whatsapp
Exit mobile version