Home ಅಂಕಣಗಳು ರಾಜಕೀಯ ದಾಳಕ್ಕೆ ಸಿಲುಕಿ ಧ್ವಂಸಗೊಂಡ ಬಾಬರಿ

ರಾಜಕೀಯ ದಾಳಕ್ಕೆ ಸಿಲುಕಿ ಧ್ವಂಸಗೊಂಡ ಬಾಬರಿ

✍️ಎಫ್. ನುಸೈಬಾ… ಕಲ್ಲಡ್ಕ

ಪ್ರಜಾಸತ್ತಾತ್ಮಕ ದೇಶವೊಂದರ ಅಡಿಗಲ್ಲನ್ನೇ ಅಲುಗಾಡಿಸಿದಂತಹ ರಕ್ತ ಸಿಕ್ತ ಇತಿಹಾಸಕ್ಕೆ ಸಾಕ್ಷಿಯಾದ ದಿನವಾಗಿತ್ತು 1992ರ ಡಿಸೆಂಬರ್ 6. ಅತ್ಯಂತ ಪೂರ್ವಯೋಜಿತವಾಗಿ ನಡೆದ ಬಾಬರಿ ಮಸೀದಿಯ ಧ್ವಂಸ ಪ್ರಕರಣ ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿ ಎದ್ದು ಕಾಣುತ್ತದೆ. ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಅದನ್ನೇ ಸತ್ಯವಾಗಿ ಬಿಂಬಿಸಿದ ಫ್ಯಾಶಿಸ್ಟರ ಅಟ್ಟಹಾಸಕ್ಕೆ ಅಂದು ಬಾಬರಿಯು ಧರಾಶಾಹಿಯಾಗಿತ್ತು.


ಕಳೆದ ಮೂವತ್ತು ವರ್ಷಗಳಿಂದ ಭಾರತೀಯ ಮುಸಲ್ಮಾನರ ಹೃದಯಗಳಲ್ಲಿ ಅಚ್ಚೊತ್ತಿ ನಿಂತಿರುವ ಕರಾಳ ದಿನದ ಈ ಪ್ರಕರಣವು ಉತ್ತರ ಪ್ರದೇಶದ ಅಯೋಧ್ಯೆ ಎಂಬ ಪ್ರದೇಶಕ್ಕೆ ಸಂಬಂಧಿಸಿದೆ. 1528ರಲ್ಲಿ ತಲೆ ಎತ್ತಿದ ಬಾಬರಿಯು ಶತಮಾನಗಳಿಂದ ಮುಸ್ಲಿಮರ ಆರಾಧನಾ ಕೇಂದ್ರವಾಗಿ, ದೇಶದ ಸಾರ್ವಭೌಮತ್ವದ ಸಂಕೇತವಾಗಿ ನೆಲೆಯೂರಿತ್ತು. 1858 ರಲ್ಲಿ ರಘುಬೀರ್ ದಾಸ್ ಎಂಬ ವ್ಯಕ್ತಿಯು ಮಸೀದಿಯ 100 ಮೀ. ಅಂತರದಲ್ಲಿ ಮಂದಿರ ನಿರ್ಮಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತಾನೆ. ಬಾಬರಿ ಧ್ವಂಸದ ಷಡ್ಯಂತ್ರವು ಇಲ್ಲಿಂದಲೇ ಆರಂಭವಾಗಿತ್ತು. ಹಲವು ಪರ ವಿರೋಧಗಳ ಕಲಾಪಗಳ ಮಧ್ಯೆಯೇ ಒಂದು ದಿನ ಅಕ್ರಮವಾಗಿ ಮಸೀದಿಯೊಳಗೆ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ತದನಂತರದ ಬೆಳವಣಿಗೆಗಳಲ್ಲಿ 1950 ರಲ್ಲಿ ಫೈಜಾಬಾದ್ ಡೆಪ್ಯುಟಿ ಕಮಿಷನರ್ ಸಿಯೋಲ್ ನ್ಯಾಯಾದೀಶರ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದರು. ಈ ಆಸ್ತಿಯು ಮುಸ್ಲಿಮರಿಗೆ ಸೇರಿದ್ದು ಎಂದು ತನಿಖಾ ವರದಿ ಹೇಳಿತು. ಈ ಎಲ್ಲಾ ವಾದ ವಿವಾದಗಳ ಮಧ್ಯೆ 1989 ರಲ್ಲಿ ಬಿಜೆಪಿ ನಾಯಕ ಎಲ್. ಕೆ ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆಯು ನಡೆಯಿತು. ದ್ವೇಷದ ಕಿಚ್ಚು ಹೊತ್ತಿಸಿದ ಈ ರಥಯಾತ್ರೆಯ ಮೂಲ ಪ್ರೇರಣೆಯೇ 1992 ರಲ್ಲಿ ಬಾಬರಿಯ ಧ್ವಂಸಕ್ಕೆ ಕಾರಣವಾಯಿತು.


ಬಾಬರಿ ಧ್ವಂಸವು ಪೂರ್ವ ಯೋಜಿತ ಕೃತ್ಯವಲ್ಲ, ಬದಲಾಗಿ ಅದೊಂದು ಅನಿರೀಕ್ಷಿತ ಘಟನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಬಿಜೆಪಿಯ ಅಧಿಕಾರ ದಾಹದ ಶಮನಕ್ಕಾಗಿ ವರ್ಷಗಳ ಕಾಲ ನಡೆದ ವ್ಯವಸ್ಥಿತ ಷಡ್ಯಂತ್ರದ ಮೂಲಕ ಇದನ್ನು ಕಾರ್ಯಗತ ಗೊಳಿಸಲಾಗಿದೆ ಎನ್ನುವುದೇ ವಾಸ್ತವ. ಇದಕ್ಕೆ ಸಾಕಷ್ಟು ಪುರಾವೆಗಳನ್ನು ಗಮನಿಸಬಹುದು. ಅಡ್ವಾಣಿ, ಜೋಶಿ, ಉಮಾಭಾರತ ಮುಂತಾದ ಬಿಜೆಪಿ ನಾಯಕರು ವರ್ಷಗಳ ಮೊದಲೇ ಬಾಬರಿಯನ್ನು ಧ್ವಂಸ ಗೊಳಿಸಿ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಭಾಷಣ ಮಾಡುತ್ತಿದ್ದರು. ಮಸ್ಜಿದ್ ನಲ್ಲಿ ಪ್ರತಿಷ್ಠಾಪಿಸಿದ್ದ ರಾಮನ ವಿಗ್ರಹ ಮತ್ತು ಭಂಡಾರವನ್ನು ತೆಗೆದು ತಾತ್ಕಾಲಿಕ ಶೆಡ್ ನಲ್ಲಿ ಪುನಃ ಸ್ಥಾಪಿಸಲಾಯಿತು. ತನ್ನ ರಥಯಾತ್ರೆಯ ಮೂಲಕ ಅಡ್ವಾಣಿಯವರು ಜನರನ್ನು ಪ್ರಚೋದಿಸಿ “ಮಂದಿರ್ ವಹೀ ಬನಾಯೇಂಗೆ” (ಮಂದಿರ ಅಲ್ಲೇ ನಿರ್ಮಿಸುತ್ತೇವೆ) ಎಂದು ರಾಮನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿಸಿದ್ದರು. ಜೊತೆಗೆ ಕರಸೇವಕರಾಗಿ ಅಯೋಧ್ಯೆಗೆ ಆಗಮಿಸಿರಿ ಎಂದು ಕರೆ ನೀಡಿದರು. ಅಯೋಧ್ಯೆ ತಲುಪಿದ ಜನರಿಗೆ ತಂಗಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತು. ಮಸೀದಿ ಒಡೆಯಲು ಡಿಸೆಂಬರ್ 5 ರಂದು ರಿಹರ್ಸಲ್ ನಡೆಸಲಾಗಿತ್ತು ಎಂದು ಅಂದು ಪತ್ರಕರ್ತೆಯಾಗಿದ್ದ ರುಚಿರಾ ಹೇಳಿದ್ದರು. ಮಸ್ಜಿದ್ ನ ಅಡಿಪಾಯವನ್ನು ದುರ್ಬಲಗೊಳಿಸಲು ಸುತ್ತಲೂ ಕಂದಕ ತೋಡಿ, ಬೃಹತ್ ಗಾತ್ರದ ಮಸೀದಿಯನ್ನು ಕೇವಲ ಐದು ತಾಸುಗಳಲ್ಲಿ ಧ್ವಂಸಗೊಳಿಸುವುದು ಪೂರ್ವಯೋಜಿತವಾಗಿರದೆ ಆಕಸ್ಮಿಕವಾಗಿರಲು ಹೇಗೆ ಸಾಧ್ಯ? ಅಲ್ಲದೆ ಈ ಪ್ರಕರಣದ ತನಿಖೆಗಾಗಿ ನೇಮಿಸಲ್ಪಟ್ಟಿದ್ದ ಲಿಬರ್ಹಾನ್ ಆಯೋಗವು ಮಸೀದಿ ಧ್ವಂಸವು ಬಿಜೆಪಿ ಮತ್ತು ಅರ್ ಎಸ್ ಎಸ್ ನ ವ್ಯವಸ್ಥಿತ ಸಂಚಿನ ಫಲವೆಂದು ಸ್ಪಷ್ಟವಾಗಿ ಹೇಳಿದೆ. ಘಟನೆಯಲ್ಲಿ ವಾಜಪೇಯಿ, ಅಡ್ವಾಣಿ, ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಅವರ ಅಧಿಕಾರಿಗಳು, ಮಂತ್ರಿಗಳು ಎಲ್ಲರೂ ತಪ್ಪಿತಸ್ಥರು ಎಂದು ಅದು ವಾದಿಸಿತ್ತು. ಆದರೆ ಈ ವರದಿಗಳೆಲ್ಲ ಸುಳ್ಳು ಎನ್ನುವಂತೆ 2020 ರಲ್ಲಿ ಬಿಜೆಪಿ ನಾಯಕರು ಸೇರಿದಂತೆ 32 ಆರೋಪಿಗಳನ್ನು ಲಕ್ನೋ ನ್ಯಾಯಾಲಯವು ದೋಷಮುಕ್ತಗೊಳಿಸಿತು. ನ್ಯಾಯ ವ್ಯವಸ್ಥೆಯು ಸಂಪೂರ್ಣ ಬುಡಮೇಲಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಲಕ್ನೋ ನ್ಯಾಯಾಲಯದ ತೀರ್ಪು ಅತಿಶಯೋಕ್ತಿಯಲ್ಲ. ಸಾಕ್ಷಿಗಳೆಲ್ಲವೂ ಬಾಬರಿಯ ಪರ ಇದ್ದರೂ, ಮಸೀದಿ ಧ್ವಂಸ ಅಪರಾಧ ಕೃತ್ಯವೆಂದು ಒಪ್ಪಿಕೊಂಡರೂ, ಒಂದು ವರ್ಗದ ಓಲೈಕೆಗಾಗಿ ಅನ್ಯಾಯವನ್ನು ನ್ಯಾಯವೆಂಬಂತೆ ಬಿಂಬಿಸಿ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿನ ಮುಂದುವರಿದ ಭಾಗವಾಗಿತ್ತಷ್ಟೇ ಅದು.


ಈ ದೇಶದ ಸಂವಿಧಾನ, ಕಾನೂನಿನ ಮೇಲೆ ನಂಬಿಕೆಯಿರಿಸಿದ ಭಾರತೀಯ ಮುಸಲ್ಮಾನರು ಬಾಬರಿಯ ವಿಚಾರದಲ್ಲಿ ಅಕ್ಷರಶಃ ವಂಚನೆಗೆ ಒಳಗಾದರು. ಅಂದಿನ ಆಡಳಿತ ಪಕ್ಷಗಳು ಬಾಬರಿಯನ್ನು ಪುನರ್ ನಿರ್ಮಿಸುವ ಸುಳ್ಳು ಭರವಸೆ ನೀಡಿ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸುತ್ತ ಬಂತು. ಇಂದು ಬಿಜೆಪಿಯು ತನ್ನ ಅಧಿಕಾರ ಪ್ರಭಾವದಿಂದ ಸಾಂವಿಧಾನಿಕ ಮೌಲ್ಯಗಳನ್ನು ಮೂಲೆಗುಂಪಾಗಿಸಿ ದೇಶವನ್ನು ಅರಾಜಕತೆಗೆ ತಳ್ಳುತ್ತಿರುವಂತೆ ಅಂದಿನ ಆಡಳಿತ ಪಕ್ಷ ತನ್ನ ಅಧಿಕಾರ ಪ್ರಾಬಲ್ಯವನ್ನು ಬಳಸಿಕೊಂಡಿದ್ದಲ್ಲಿ ಬಾಬರಿಯು ಧರೆಗುರುಳುತ್ತಿರಲಿಲ್ಲ. ಇದರ ಲಾಭ ಪಡೆದ ಸಂಘಪರಿವಾರದ ಕರಾಳ ಕೈಗಳಲ್ಲಿ ಭಾರತವಿಂದು ನಲುಗುತ್ತಿರಲಿಲ್ಲ. ಪ್ರಖ್ಯಾತ ಚಿಂತಕ ಇಜಾಝ್ ಅಹ್ಮದ್ ಹೇಳುವಂತೆ ಬಿಜೆಪಿಯದ್ದು ಯೋಜಿತ ಕೋಮುವಾದವಾದರೆ ಕಾಂಗ್ರೆಸ್ ನದ್ದು ವ್ಯಾವಹಾರಿಕ ಕೋಮುವಾದ. ರಾಜೀವ್ ಗಾಂಧಿ ರಾಮಮಂದಿರದ ಬೀಗ ತೆರೆದದ್ದು, ಧ್ವಂಸ ದಿನ ನರಸಿಂಹರಾವ್ ನಿದ್ದೆಗೆ ಜಾರಿದ್ದು, ಅಲ್ಲದೆ ಇತ್ತೀಚೆಗೆ ರಾಮಮಂದಿರ ಶಿಲಾನ್ಯಾಸದ ದಿನ ಕಾಂಗ್ರೆಸ್ ಸಂಭ್ರಮಿಸಿದ್ದು, ಮಂದಿರವು ರಾಷ್ಟ್ರೀಯ ಭಾವನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದು ಎಲ್ಲವೂ ಕಾಂಗ್ರೆಸ್ ನ ವ್ಯವಹಾರಿಕ ಕೋಮುವಾದದ ಫಲವಾಗಿದೆ. ಇದರಿಂದಾಗಿಯೇ ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು.


ಮಸೀದಿ ಧ್ವಂಸ, ಮಂದಿರ ನಿರ್ಮಾಣ ರಾಮನ ಮೇಲಿನ ಭಕ್ತಿಯ ಪ್ರತೀಕವಲ್ಲ.. ಅದು ಕೇವಲ ರಾಜಕೀಯ ಅಸ್ತ್ರ ಮಾತ್ರ. ಕೋಮು ಧ್ರುವೀಕರಣವನ್ನೇ ಅಧಿಕಾರದ ಅಸ್ತ್ರವಾಗಿಸಿ ರಾಜಕೀಯ ದೊಂಬರಾಟಕ್ಕೆ ವೇದಿಕೆ ಸಿದ್ಧಪಡಿಸುವ ಬಿಜೆಪಿಯ ಅಜೆಂಡಾ ಗೌಪ್ಯವಾಗಿ ಉಳಿದಿಲ್ಲ. ಕೇವಲ ಎರಡು ಸೀಟುಗಳಿಂದ ಆರಂಭಗೊಂಡ ಬಿಜೆಪಿಯ ರಾಜಕೀಯ ರಂಗ ಪ್ರವೇಶ ಬಾಬರಿಯ ಧ್ವಂಸದ ನಂತರ 1996 ರ ಲೋಕಸಭಾ ಚುನಾವಣೆಯಲ್ಲಿ 161 ಮತಗಳನ್ನು ಪಡೆಯುವ ಮೂಲಕ ವಿಜೃಂಭಿಸಿತ್ತು.


ಅಂದಿನ ಕರಸೇವೆಯಲ್ಲಿ ಪಾಲ್ಗೊಂಡ ಅಯೋಧ್ಯೆಯ ಓರ್ವ ವ್ಯಾಪಾರಿ ಅಶೋಕ್ ಚಟರ್ಜಿ ಹೇಳುವಂತೆ, ರಾಮಮಂದಿರ ನಿರ್ಮಾಣ ಅಜೆಂಡಾ ಹಿಂದುತ್ವ ಯೋಜನೆಯ ತನ್ನ ಉದ್ದೇಶವನ್ನು ಈಗಾಗಲೇ ಸಾಧಿಸಿ ಬಿಟ್ಟಿದೆ. ಈ ಸಾಧನೆಯ ಪ್ರತೀಕವೇ ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ. ಇದಲ್ಲದೆ ಫೆಗಾಸಸ್ ಹಗರಣ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಂಜನ್ ಗೊಗೊಯ್ 2021 ನವೆಂಬರ್ 9 ರಂದು ನ್ಯಾಯವನ್ನು ಅಣಕಿಸುವಂತೆ ಮಂದಿರ ನಿರ್ಮಾಣದ ಪರ ಅನ್ಯಾಯದ ತೀರ್ಪು ನೀಡಿದ ನಂತರ ಬಿಜೆಪಿಯ ರಾಜ್ಯ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದೂ ಕೂಡ ರಾಜಕೀಯ ಮೋಸದಾಟದ ಮುಂದುವರಿದ ಭಾಗವೇ ಆಗಿದೆ. ಒಟ್ಟಿನಲ್ಲಿ ಅಕ್ರಮ ರಾಜಕೀಯ ದಾಳಕ್ಕೆ ಸಿಲುಕಿ ಬಾಬರಿಯು ಧರೆಗುರುಳಿದ್ದು ಮಾತ್ರ ಅಳಿಸಲಾಗದ ವಾಸ್ತವ.

Join Whatsapp
Exit mobile version