Home ಟಾಪ್ ಸುದ್ದಿಗಳು ಬಾಬರಿ ಮಸೀದಿ ಧ್ವಂಸದ ಆರೋಪಿಗಳ ಖುಲಾಸೆ: ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಕೋರ್ಟ್

ಬಾಬರಿ ಮಸೀದಿ ಧ್ವಂಸದ ಆರೋಪಿಗಳ ಖುಲಾಸೆ: ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಕೋರ್ಟ್

ಲಕ್ನೋ: 1992ರಂದು ಬಾಬರೀ ಮಸೀದಿಯನ್ನು ಧ್ವಂಸಗೊಳಿಸಲು ಸಂಚು ರೂಪಿಸಿದ ಆರೋಪಿಗಳನ್ನು ಖುಲಾಸೆಗೊಳಿಸಿದ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 31ರಂದು ಈ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.

ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಸೆಪ್ಟೆಂಬರ್ 2020ರಂದು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಮಸೀದಿ ಧ್ವಂಸವು ಪೂರ್ವಯೋಜಿತವಾಗಿಲ್ಲ ಮತ್ತು ಅದರ ಹಿಂದೆ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ ಎಂದು ಆರೋಪಿಗಳನ್ನು ಸಮರ್ಥಿಸಿಕೊಂಡು ಲಕ್ನೋದ ಸಿಬಿಐ ನ್ಯಾಯಾಧೀಶ ಎಸ್.ಕೆ ಯಾದವ್ ಅವರು ಸೆಪ್ಟೆಂಬರ್ 30,2020 ರಂದು ತೀರ್ಪು ನೀಡಿದ್ದರು.

1992ರ ಡಿಸೆಂಬರ್ 6ರಂದು ವಿವಾದಾತ್ಮಕ ಬಾಬರೀ ಮಸೀದಿ ಧ್ವಂಸ ಪ್ರಕರಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಆಯೋಧ್ಯೆ ನಿವಾಸಿಗಳಾದ ಹಾಜಿ ಮಹಮೂದ್ ಅಹ್ಮದ್ ಮತ್ತು ಸೈಯದ್ ಅಖ್ಲಾಕ್ ಅಹ್ಮದ್ ಎಂಬವರು ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ. ತಾವು ಕೂಡ ಘಟನೆಯಲ್ಲಿ ಸಂತ್ರಸ್ತರಾಗಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

Join Whatsapp
Exit mobile version