Home ಟಾಪ್ ಸುದ್ದಿಗಳು ‘ಸಂವಾದ’ ಪ್ರತಿನಿಧಿ ಮೇಲೆ ಹಲ್ಲೆ: ಆರೋಪಿಗಳಿಗೆ ಜಾಮೀನು

‘ಸಂವಾದ’ ಪ್ರತಿನಿಧಿ ಮೇಲೆ ಹಲ್ಲೆ: ಆರೋಪಿಗಳಿಗೆ ಜಾಮೀನು

ಬೆಂಗಳೂರು: ಫೇಸ್ ಬುಕ್ ಪೇಜ್ ನ ಸಂವಾದ ಪ್ರತಿನಿಧಿ ತೇಜ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಪಠ್ಯಪುಸ್ತಕ ಮರು ಪರಿಷ್ಕರಣೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಜೂನ್ 18ರಂದು ಪ್ರತಿಭಟನೆ ನಡೆದ ಸಂದರ್ಭದಲ್ಲಿ ತೇಜ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೀಲಪ್ಪ ಮತ್ತು ಶಿವರಾಜ್ ನಿಯಮಿತ (ರೆಗ್ಯುಲರ್) ಜಾಮೀನು ಕೋರಿದ್ದರು. ನಿರೀಕ್ಷಣಾ ಜಾಮೀನು ಕೋರಿ ಬೈರಪ್ಪ ಹರೀಶ್ ಕುಮಾರ್ ಮತ್ತು ದೀಪುಗೌಡ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಾಧೀಶ ವಿ.ಪ್ರಕಾಶ್ ಶನಿವಾರ ವಿಚಾರಣೆ ನಡೆಸಿದರು.


ಎಲ್ಲ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ.ಎಚ್. ಹನುಮಂತರಾಯ, ‘ದೂರುದಾರ ತೇಜ ಪತ್ರಕರ್ತರಲ್ಲ. ಸಂವಾದ ಎನ್ನುವುದು ಟಿವಿ ಚಾನೆಲ್ ಕೂಡ ಅಲ್ಲ. ಅದೊಂದು ಯೂಟ್ಯೂಬ್ ಅಕೌಂಟ್. ಅದರಲ್ಲಿ ಯಾವುದೇ ಸುದ್ದಿಗಳು ಪ್ರಸಾರವಾಗುವುದಿಲ್ಲ. ಅದರ ಪ್ರತಿನಿಧಿ ಪ್ರತಿಭಟನೆಗೆ ಬಂದದ್ದು ತನ್ನ ಸಂಘಟನೆಯ ನಾಯಕರಿಗೆ ವರದಿ ಒಪ್ಪಿಸಲಿಕ್ಕೇ ಹೊರತು ಪತ್ರಿಕೋದ್ಯಮದ ವರದಿ ಮಾಡಲು ಅಲ್ಲ. ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದರು. ಅರ್ಜಿದಾರರ ಪರ ಸೂರ್ಯ ಮುಕುಂದರಾಜ್ ವಕಾಲತ್ತು ವಹಿಸಿದ್ದರು.

Join Whatsapp
Exit mobile version