Home ಟಾಪ್ ಸುದ್ದಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕಡ್ಡಾಯ: ಡಿಸಿಎಂ

ಅಪಾರ್ಟ್‌ಮೆಂಟ್‌ಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕಡ್ಡಾಯ: ಡಿಸಿಎಂ

ಬೆಂಗಳೂರು: ವಸತಿ ಸಮುಚ್ಛಯಗಳು ಸೇರಿದಂತೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ.

 “ಎಲೆಕ್ಟ್ರಿಕ್‌ ವಾಹನಗಳನ್ನು ಒದಗಿಸಿದರಷ್ಟೇ ಸಾಲದು. ಎಲ್ಲೆಡೆಯೂ ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳುವಂಥ ವ್ಯವಸ್ಥೆ ಇರಲೇಬೇಕು. ಮುಂದಿನ ದಿನಗಳಲ್ಲಿ ಬ್ಯಾಟರಿ ವಾಹನಗಳು ಮಾರುಕಟ್ಟೆಗೆ ಬರಲಿವೆ. ಗ್ರಾಹಕರು ಬ್ಯಾಟರಿಗಳನ್ನು ಬಾಡಿಗೆಗೆ ಪಡೆದು ಆ ವಾಹನಗಳನ್ನು ಚಲಾಯಿಸಿಕೊಂಡು ಹೋಗಬಹುದು. ಎಲ್ಲೆಡೆ ಪೆಟ್ರೋಲ್‌ ಬಂಕ್‌ಗಳಂತೆ ಬ್ಯಾಟರಿ ಬಂಕ್‌ಗಳೂ ತಲೆಎತ್ತಲಿವೆ. ಆಗ ಗ್ರಾಹಕನಿಗೆ ಕಡಿಮೆ ದರದಲ್ಲಿ ವಾಹನವೂ ದೊರೆಯಲಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಗ್ರಾಹಕನು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಬಹುದು” ಎಂದು ಬೆಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಯ ಬಗ್ಗೆ ಹಾರ್ವರ್ಡ್‌ ಇಂಡಿಯಾ ಕಾನ್ಫರೆನ್ಸ್‌ ವತಿಯಿಂದ ಏರ್ಪಡಿಸಲಾಗಿದ್ದ ‘ಭವಿಷ್ಯದತ್ತ ಸುಸ್ಥಿರ ಸಾರಿಗೆ’ ವರ್ಚುಯಲ್‌ ಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ವಾಹನ ಮಾಲಿನ್ಯ ತಡಗಟ್ಟಲು ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಲೇಬೇಕು. ಅದಕ್ಕೆ ಬೇಕಾದ ಸಬ್ಸಿಡಿ, ರಿಯಾಯಿತಿ ವಿದ್ಯುತ್‌ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶದಲ್ಲೇ ಮೊತ್ತ ಮೊದಲಿಗೆ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಅನುಷ್ಠಾನಕ್ಕೆ ತಂದಿರುವ ಕರ್ನಾಟಕವು ಹೊಗೆರಹಿತ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಅಶ್ವತ್ತ ನಾರಾಯಣ್ ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ವಾಣಿಜ್ಯ ಬಳಕೆಗೆ ನೀಡುವ ವಿದ್ಯುತ್‌ಗಿಂತ ಎಲೆಕ್ಟ್ರಿಕ್‌ ವಾಹನಗಳಿಗೆ ಅಗ್ಗದ ದರದಲ್ಲಿ ವಿದ್ಯುತ್‌ ನೀಡಲಾಗುತ್ತಿದೆ. ಮುಂದೆಯೂ ಈ ಸೌಲಭ್ಯ ಇರುತ್ತದೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗಣನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಸ್ತೆ, ವಿದ್ಯುತ್‌, ನೀರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಕ ಸುಧಾರಣೆಗಳನ್ನು ತರಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ಎಲೆಕ್ಟ್ರಿಕ್‌ ವಾಹನ ತಯಾರಿಕೆ ಹಾಗೂ ಅದಕ್ಕೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಸರಕಾರ ಹೆಚ್ಚು ಬೆಂಬಲ ನೀಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ ಎಂದ ಅವರು, ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಕರ್ನಾಟಕವು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಗೋಷ್ಠಿಯಲ್ಲಿ ಸಿಡಿಪಿಕ್ಯೂ ಗ್ಲೋಬಲ್‌ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷೆ ಅನಿತಾ ಜಾರ್ಜ್‌, ಉದ್ಯಮಿ ವಿಘ್ನೇಶ್‌ ನಂದಕುಮಾರ್‌ ಹಾಗೂ ಬಿನಾಯ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಹ ಸಂಸ್ಥಾಪಕ ವಿಭು ಬಿನಾಯ್‌ ಉಪಸ್ಥಿತರಿದ್ದರು.

Join Whatsapp
Exit mobile version