Home ಟಾಪ್ ಸುದ್ದಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ವಿಶೇಷ ಅಭಿಯೋಜಕರ ನೇಮಕ: ಅರಗ ಜ್ಞಾನೇಂದ್ರ

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ವಿಶೇಷ ಅಭಿಯೋಜಕರ ನೇಮಕ: ಅರಗ ಜ್ಞಾನೇಂದ್ರ

ಬೆಂಗಳೂರು: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಮಹಿಳೆ ಮೇಲೆ ನಡೆದ ಅಮಾನುಷ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರನ್ನು ಅಭಿನಂದಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಅವರು ಇಂದು ಸುದ್ದಿಗಾರರರೊಂದಿಗೆ ಮಾತನಾಡುತ್ತ, ಆರೋಪಿಗಳನ್ನು ಬಂಧಿಸುವ ಮೂಲಕ ಕರ್ನಾಟಕ ಪೊಲೀಸರು ತಮ್ಮ ಕರ್ತವ್ಯದಲ್ಲಿ ದಕ್ಷತೆ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಶಂಶಿಸಿದರು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಬಂದು ಹೋಗುವ ಸಾಂಸ್ಕೃತಿಕ ನಗರ ಮೈಸೂರು, ಅದರ ಖ್ಯಾತಿ ಮತ್ತು ಘನತೆಯನ್ನು ಸಂರಕ್ಷಿಸುವುದಾಗಿ ತಿಳಿಸಿದ ಸಚಿವರು, ಘಟನೆ ನಡೆದ ಪ್ರದೇಶದಲ್ಲಿ ಹೆಚ್ಚಿನ ಗಸ್ತು ವ್ಯವಸ್ಥೆ ಮಾಡಿ ಆ ಪ್ರದೇಶಕ್ಕೆ ಭೇಟಿ ನೀಡುವ ನಾಗರಿಕರಿಗೆ ರಕ್ಷಣೆ ಒದಗಿಸುವುದಾಗಿ ತಿಳಿಸಿದರು.


“ಮೈಸೂರಿನ ಅತ್ಯಾಚಾರ ಘಟನೆಯನ್ನು ಭೇದಿಸುವುದು ನಮ್ಮ ಪೊಲೀಸರಿಗೆ ಒಂದು ಸವಾಲಿನ ಕೆಲಸವಾಗಿತ್ತು ಮತ್ತು ಅವರು ತಮಗೆ ಲಭಿಸಿದ ಸಾಕ್ಷ್ಯಗಳನ್ನು ವೈಜ್ಞಾನಿಕ ಹಾಗು ತಾಂತ್ರಿಕ ತಳಹದಿಯ ಮೇಲೆ ಸಂಸ್ಕರಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಘಟನೆಯ ಆರೋಪಿಗಳಿಗೆ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆಯಾಗುವಂತೆ ನೆರವಾಗಲು ಸರಕಾರದಿಂದ ವಿಶೇಷ ಅಭಿಯೋಜಕರನ್ನು ನೇಮಿಸುವಂತೆ ಶಿಫಾರಸುಗಳನ್ನು ಮಾಡಲಾಗುವುದು ಎಂದರು.

Join Whatsapp
Exit mobile version