ಪುಣೆ: ಪರಸ್ಪರ ಸಮ್ಮತಿಯಿಂದ ನಡೆಸುವ ದೈಹಿಕ ಸಂಪರ್ಕಕ್ಕೆ ಲಿವ್ ಇನ್ ಸಂಬಂಧವೇ ಸಾಕ್ಷಿಯೆಂದು ಮುಂಬೈ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಈ ಸಂಬಂಧ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಯುವಕನಿಗೆ ಜಾಮೀನು ಮಂಜೂರು ಮಾಡಿದೆ.
ಲಿವ್ ಇನ್ ಸಂಗಾತಿಯಾದ ಆರೋಪಿಗೆ ಜಾಮೀನು ಮಂಜೂರು ಮಾಡುವುದರಲ್ಲಿ ತನಗೆ ಯಾವುದೇ ಆಕ್ಷೇಪವಿಲ್ಲ ಎಂದು ದೂರುದಾರೆ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ದೂರುದಾರೆ ವಿವಾಹೇತರ ಜೀವನ ನಡೆಸುತ್ತಿದ್ದರೆಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಎಸ್.ಯು ಬಗೇಲ್ ತಿಳಿಸಿದ್ದಾರೆ.
ದೈಹಿಕ ಸಂಪರ್ಕವು ಪರಸ್ಪರ ಒಮ್ಮತದ ಮೂಲಕ ನಡೆದಿದೆಯೆಂಬುದು ಲಿವ್ ಇನ್ ಸಂಬಂಧದ ಹಿನ್ನೆಲೆಯಲ್ಲಿ ಸಾಬೀತಾಗಿರುವುದರಿಂದ ಅರೋಪಿ ಜಾಮೀನು ಪಡೆಯಲು ಅರ್ಹವಾಗಿದ್ದಾರೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ವಿವಾಹವಾಗುವುದಾಗಿ ನಂಬಿಸಿ ಆರೋಪಿಯು ದೂರುದಾರೆಯನ್ನು 2018 ನವೆಂಬರ್ ನಿಂದ 2020 ಮೇ ವರೆಗೆ ಅಪಾರ್ಟ್ ಮೆಂಟ್ ಒಂದರಲ್ಲಿ ಪ್ಲಾಟ್ ಬಾಡಿಗೆಗೆ ಪಡೆದು ನಿರಂತರ ಅತ್ಯಾಚಾರ ನಡೆಸಿ ವಿವಾಹವಾಗದೆ ವಂಚಿಸಿದ್ದನು ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಈ ಸಂಬಂಧ ಆರೋಪಿಯ ಪೊಲೀಸರು ವಿರುದ್ಧ ಐಪಿಸಿ ಸೆಕ್ಷನ್ 376, 313 ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ಅರೋಪಿಗೆ ಜಾಮೀನು ನೀಡುವುದರಲ್ಲಿ ಆಕ್ಷೇಪವಿಲ್ಲವೆಂದು ದೂರುದಾರೆ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿ, ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿದ್ದಾರೆ. ಮಾತ್ರವಲ್ಲದೆ ಜೊತೆಯಾಗಿ ಜೀವನ ನಡೆಸುತ್ತಿದ್ದಾಗ 2 ಸಲ ಗರ್ಭಪಾತ ಮಾಡಿಸಿರುವುದಾಗಿ ನ್ಯಾಯಾಯಲಕ್ಕೆ ತಿಳಿಸಿದ್ದಾರೆ.
ಸಂತ್ರಸ್ತೆ ಪರ ವಾದಿಸಿದ ಪ್ರಾಸಿಕ್ಯೂಷನ್ ದೂರುದಾರೆಯ ಹೇಳಿಕೆಯನ್ನು ದಾಖಲಿಸದ ಕಾರಣ ಸೆಕ್ಷನ್ 164 ಅಡಿಯಲ್ಲಿ ಜಾಮೀನು ಮಂಜೂರಾತಿಗೆ ವಿರೋಧವ್ಯಕ್ತಪಡಿಸಿದರು. ಮಾತ್ರವಲ್ಲದೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಯು ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೆಂದು ವಾದಿಸಿದರು. ಉಭಯ ಕಕ್ಷಿದಾರರ ವಾದವನ್ನು ಆಲಿಸಿದ ನ್ಯಾಯಾಪೀಠವು ಆರೋಪಿಗೆ 15 ಸಾವಿರ ವೈಯಕ್ತಿಕ ಬಾಂಡ್ ನ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದೆ.