▪️ಲೈನ್‌ಮ್ಯಾನ್‌ಗಳಿಗೆ ಸೂಕ್ತ ಸುರಕ್ಷತಾ ಕವಚ ನೀಡಲು ಆಗ್ರಹ
ನಿಂತಿಕಲ್: ಅಲೆಕ್ಕಾಡಿ ಸಮೀಪದ ಪಿಜಾವು ಎಂಬಲ್ಲಿ ಕಡಬದ ಎಲೆಕ್ಟ್ರಿಕಲ್ ಅಂಗಡಿಯ ಕಾರ್ಮಿಕ ಬೆಳ್ತಂಗಡಿ ಮೂಲದ ಪ್ರಕಾಶ್ ಎಂಬವರು ವಿದ್ಯುತ್ ಕಂಬದಿಂದ ಬಿದ್ದು ಮೃತಪಟ್ಟ ಘಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿಂತಿಕಲ್ ವಲಯ ಸಮಿತಿ ಅಧ್ಯಕ್ಷ ಹಮೀದ್ ಮರಕ್ಕಡ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಈ ಆಘಾತಕಾರಿ ವಾರ್ತೆಯನ್ನು ಕೇಳಿ ಅತೀವ ದುಃಖವನ್ನು ಉಂಟುಮಾಡಿದೆ. ಅವರ ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಅವರ ಅಗಳುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ದಯಪಾಲಿಸಲಿ ಎಂದು ಸಂತಾಪ ಸೂಚಕ ಪ್ಪಕಟನೆಯಲ್ಲಿ ಅವರು ತಿಳಿಸಿದ್ದಾರೆ.
ಲೈನ್ ಮ್ಯಾನ್‌ಗಳು ಹಾಗೂ ವಿದ್ಯುತ್ ಕೆಲಸ ಮಾಡುವ ಕಾರ್ಮಿಕರ ಜೀವಕ್ಕೆ ಬೆಲೆ ಹಾಗೂ ಭದ್ರತೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವಾರು ಘಟನೆಗಳು ನಡೆದು ಲೈನ್ ಮ್ಯಾನ್‌ಗಳ ಜೀವ ಹಾನಿಯಾಗಿದ್ದರೂ ಅವರ ಸುರಕ್ಷತೆಗೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಲ್ಲ. 6 ತಿಂಗಳ ಹಿಂದೆ ಪಂಜದಲ್ಲಿ ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿದ್ದರು ಹಾಗೂ ಒಂದು ತಿಂಗಳ ಹಿಂದೆ ಬಾಳಿಲದಲ್ಲಿ ಲೈನ್ ಮ್ಯಾನ್ ಓರ್ವರು ಕಂಬದಿಂದ ಬಿದ್ದು ಗಾಯಗೊಂಡ ಘಟನೆ ಮಾಸುವ ಮುನ್ನವೇ ಅಲೆಕ್ಕಾಡಿಯಲ್ಲಿ ವಿದ್ಯುತ್ ಕಾರ್ಮಿಕನ ಸಾವಾಗಿದೆ. ಈ ಸಾವಿಗೆ ಯಾರೂ ಹೊಣೆ ಎಂದು ಪ್ರಶ್ನಿಸಿದ್ದಾರೆ.
ಯಾರ ನಿರ್ಲಕ್ಷ್ಯದಿಂದ ಇಂತಹ ಘಟನೆ ನಿರಂತರವಾಗಿ ಪುನರಾವರ್ತನೆ ಆಗುತ್ತಿದೆ?
ಇದರ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ. ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ